ಯಾವುದರಲ್ಲೂ ರಾಜಿ ಆಗುವ ಮಾತೇ ಇಲ್ಲ... ಹೊಸ ವರ್ಷದಂದೇ ಗುಡ್​ ನ್ಯೂಸ್ ಕೊಟ್ಟ ಶಿವಣ್ಣ! Shiva Rajkumar

Shiva Rajkumar
Published on

Shiva Rajkumar : ಅಭಿಮಾನಿಗಳ ನೆಚ್ಚಿನ ಶಿವಣ್ಣ ಹೊಸ ವರ್ಷದಂದೇ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಶಿವರಾಜ್​ಕುಮಾರ್​ ಅವರಿಗೆ ಅಮೆರಿಕದಲ್ಲಿ ಕ್ಯಾನ್ಸರ್​ ಸರ್ಜರಿ ಯಶಸ್ವಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯ ವಿಶ್ರಾಂತಿಯಲ್ಲಿರುವ ಶಿವಣ್ಣ, ಸರ್ಜರಿ ಬಳಿಕ ಮೊದಲ ಬಾರಿಗೆ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಶಿವರಾಜ್​ಕುಮಾರ್​ ಮತ್ತು ಗೀತಾ ಶಿವರಾಜ್​ಕುಮಾರ್​ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಶಿವಣ್ಣ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಹೊಸ ವರ್ಷದ ಶುಭಾಷಯ ಸಹ ಕೋರಿದ್ದಾರೆ.

ಕ್ಯಾನ್ಸರ್​ನ ಎಲ್ಲ ರಿಪೋರ್ಟ್​ನಲ್ಲಿ ನೆಗೆಟಿವ್ ಬಂದಿದೆ. ನಿಮ್ಮ ಶಿವಣ್ಣ ಈಗ ಕ್ಯಾನ್ಸರ್​ ಮುಕ್ತವಾಗಿದ್ದಾರೆ. ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ ಎಂದು ಗೀತಾ ಶಿವರಾಜ್ ಕುಮಾರ್ ಸಂತಸ ಹಂಚಿಕೊಂಡರು.

ಇದೇ ಸಮಯದಲ್ಲಿ ಮಾತನಾಡಿದ ಶಿವಣ್ಣ ಆಸ್ಪತ್ರೆಗೆ ಬರುವಾಗ ನನಗೆ ಭಯ ಆಗಿತ್ತು. 45 ಸಿನಿಮಾದ ಇಡೀ ಸಿನಿಮಾವನ್ನು ಕೀಮೋ ತೆರೆಪಿ ಮಾಡುವಾಗಲೇ ಕೆಲಸ ಮಾಡಿದ್ವಿ. ಇದೀಗ ಆಪರೇಷನ್ ಸಕ್ಸಸ್ ಆಗಿದೆ. ಯುಎಸ್​ನಲ್ಲಿದ್ದ ಸ್ನೇಹಿತರು, ಪತ್ನಿ ಗೀತಾ ಮತ್ತು ಮಕ್ಕಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ವೈದ್ಯರು ಕೂಡ ಮಗುವಿನಂತೆ ನೋಡಿಕೊಂಡರು. ಯುರಿನರಿ ಬ್ಲ್ಯಾಡರ್ ತಗೆದಿದ್ದಾರೆ ಅಷ್ಟೆ. ಕಿಡ್ನಿ ಕಸಿ ಮಾಡಿದ್ದಾರೆ ಅಂತ ಎಲ್ಲರೂ ಅಂದ್ಕೊಂಡಿದ್ದಾರೆ. ಆದರೆ, ಆ ರೀತಿ ಏನು ಇಲ್ಲ ಎಂದು ಶಿವಣ್ಣ ಸ್ಪಷ್ಟನೆ ನೀಡಿದರು.

ಮಾರ್ಚ್​ ನಂತರ ಮತ್ತೆ ಶೂಟಿಂಗ್​ನಲ್ಲಿ ಭಾಗಿಯಾಗುತ್ತೇನೆ. ಡಾನ್ಸ್, ಫೈಟ್ ಮತ್ತು ಲುಕ್​ ಯಾವುದರಲ್ಲೂ ನಾನು ರಾಜಿಯಾಗುವುದಿಲ್ಲ. ಹಳೇ ಶಿವಣ್ಣನಾಗಿಯೇ ನಾನು ನಿಮ್ಮೆಲ್ಲರ ಮುಂದೆ ಮತ್ತೆ ಬರುತ್ತೇನೆ ಎಂದು ಶಿವರಾಜ್​ಕುಮಾರ್​ ತಿಳಿಸಿದರು.

ಶಿವಣ್ಣ ಮಾತುಗಳನ್ನು ಕೇಳಿ ಇದೀಗ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಆದಷ್ಟು ಬೇಗ ಭಾರತಕ್ಕೆ ಮರಳಿ, ಸಂಪೂರ್ಣ ಗುಣಮುಖರಾಗಿ ಮತ್ತೆ ತೆರೆಯ ಮೇಲೆ ನಮ್ಮೆಲ್ಲರನ್ನು ರಂಜಿಸಲಿ ಎಂದು ಬಯಸಿದ್ದಾರೆ.

ಅಂದಹಾಗೆ ಶಿವಣ್ಣ ಅವರಿಗೆ ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್​ನಲ್ಲಿ ಸರ್ಜರಿ ನಡೆಯಿತು. ಈ ಶಸ್ತ್ರಚಿಕಿತ್ಸೆಯನ್ನು ಡಾ. ಮುರುಗೇಶ ಮನೋಹರನ್ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ. ಸದ್ಯ ಶಿವಣ್ಣ ವಿಶ್ರಾಂತಿಯಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net