

Team India : ಭಾರತದ ಮಾಜಿ ಕ್ರಿಕೆಟಿಗ ಸುರಿಂದರ್ ಖನ್ನಾ ಅವರು ಟೀಮ್ ಇಂಡಿಯಾ ಆಟಗಾರರ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ರೋಹಿತ್ ಶರ್ಮ ಪಡೆಯನ್ನು ಕಟುವಾಗಿ ಟೀಕಿಸಿರುವ ಸುರಿಂದರ್, ಭಾರತದ ಆಟಗಾರರು 'ಸುಳ್ಳುಗಾರರು' ಎಂದು ಕಿಡಿಕಾರಿದ್ದಾರೆ.
ಭಾರತ ಕ್ರಿಕೆಟ್ ತಂಡ ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾಗವಾಗಿ ಕಾಂಗರೂಗಳ ವಿರುದ್ಧ ಐದು ಟೆಸ್ಟ್ ಪಂದ್ಯಗಳನ್ನು ಆಡುತ್ತಿದೆ. ಈಗಾಗಲೇ 4 ಟೆಸ್ಟ್ ಪಂದ್ಯಗಳನ್ನು ಮುಗಿಸಿದೆ. ಮೊದಲ ಟೆಸ್ಟ್ನಲ್ಲಿ 295 ರನ್ಗಳ ಅಂತರದಿಂದ ಗೆದ್ದು ಉತ್ತಮ ಆರಂಭ ಪಡೆಯಿತು. ಆದರೆ, ಅದೇ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಅಡಿಲೇಡ್ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ನಲ್ಲಿ ಸೋತ ಟೀಮ್ ಇಂಡಿಯಾ ಬ್ರಿಸ್ಬೇನ್ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಆದರೆ, ಮೆಲ್ಬೋರ್ನ್ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಹೀನಾಯವಾಗಿ ಸೋಲನ್ನು ಅನುಭವಿಸಿದೆ. ಒಂದಷ್ಟು ಪ್ರಯತ್ನಪಟ್ಟಿದ್ದರೆ ಪಂದ್ಯವನ್ನು ಡ್ರಾ ಮಾಡಿಕೊಳ್ಳಬಹುದಾಗಿತ್ತು. ಆದರೆ, 184 ರನ್ಗಳಿಂದ ಪಂದ್ಯವನ್ನು ಭಾರತ ಸೋತಿದೆ.
ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಔಟಾದ ಬಳಿಕ ಭಾರತ ತಂಡ ಹಿನ್ನಡೆ ಅನುಭವಿಸಿತು. ಇದೀಗ ಜೈಸ್ವಾಲ್ ಔಟಾದ ವಿವಾದ ತಾರಕಕ್ಕೇರಿದೆ. ಉತ್ತಮ ಇನಿಂಗ್ಸ್ ಆಡುತ್ತಾ ತಂಡವನ್ನು ಮುನ್ನಡೆಸುವ ಪ್ರಯತ್ನದಲ್ಲಿದ್ದ ಜೈಸ್ವಾಲ್ ಔಟಾದರು. ಟೀಮ್ ಇಂಡಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ ಅವರು ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವರ ಬೌಲಿಂಗ್‌ನಲ್ಲಿ ಲೆಗ್‌ಸೈಡ್ ಕಡೆಗೆ ಶಾಟ್ ಆಡಲು ಪ್ರಯತ್ನಿಸಿದರು. ಆದರೆ, ಚೆಂಡು ಹೋಗಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕೈ ಸೇರಿತು.
ಈ ಹಿನ್ನೆಲೆಯಲ್ಲಿ ಆಸೀಸ್ ಮೇಲ್ಮನವಿ ಸಲ್ಲಿಸಿದಾಗ ಫೀಲ್ಡ್ ಅಂಪೈರ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಬಳಿಕ ಆಸಿಸ್ ಆಟಗಾರರು ಥರ್ಡ್ ಅಂಪೈರ್ ಮೊರೆ ಹೋದರು. ಸ್ನೀಕೊ ಮೀಟರ್‌ನಲ್ಲಿ ಚೆಂಡು ಬ್ಯಾಟ್ ಅಥವಾ ಗ್ಲೌಸ್‌ಗೆ ಬಡಿಯುತ್ತಿರುವುದು ತೋರಿಸಲಿಲ್ಲ. ಆದರೆ, ಮೂರನೇ ಅಂಪೈರ್ ಫೀಲ್ಡ್ ಅಂಪೈರ್ ನಿರ್ಧಾರವನ್ನು ರದ್ದುಗೊಳಿಸಿ ಜೈಸ್ವಾಲ್ ಅವರನ್ನು ಔಟ್ ಎಂದು ಘೋಷಿಸಿದರು. ಇದರಿಂದ ಭಾರತ ಸೋಲು ಖಚಿತವಾಯಿತು. ತಂತ್ರಜ್ಞಾನ (ಸ್ನೀಕೋ) ನಾಟೌಟ್ ಎಂದು ಹೇಳಿದ್ದರೂ ಅಂಪೈರ್‌ಗಳು ಅವರನ್ನು ಔಟ್ ಎಂದು ಘೋಷಿಸಿದ್ದಕ್ಕಾಗಿ ಜೈಸ್ವಾಲ್ ಅಸಮಾಧಾನ ವ್ಯಕ್ತಪಡಿಸಿದರು.
ತಪ್ಪಾದ ನಿರ್ಣಯ ನೀಡಿದ್ದಕ್ಕೆ ಭಾರತೀಯ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೂಡ ಮೂರನೇ ಅಂಪೈರ್ ನಿರ್ಧಾರವನ್ನು ಟೀಕಿಸಿದ್ದಾರೆ. ಜೈಸ್ವಾಲ್ ನಾಟೌಟ್ ಆಗಿರುವುದು ಸ್ಪಷ್ಟವಾಗಿದೆ. ಆದರೆ, ಥರ್ಡ್ ಅಂಪೈರ್ ಆಸೀಸ್ ಪರವಾಗಿ ಯಾಕೆ ವರ್ತಿಸಿದರು ಎಂದು ತಮ್ಮ ಕೋಪವನ್ನು ವ್ಯಕ್ತಪಡಿಸಿದರು. ಆದರೆ, ಈ ಬಗ್ಗೆ ಸುರಿಂದರ್ ಖನ್ನಾ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದಾರೆ.
ಇದರಲ್ಲಿ ವಿವಾದಕ್ಕೆ ಆಸ್ಪದವಿಲ್ಲ. ನಾಲ್ಕು ಕೋನಗಳಿಂದ ಪರಿಶೀಲನೆ ನಡೆಸಿದಾಗ ಚೆಂಡು ಬ್ಯಾಟರ್ ಗ್ಲೌಸ್‌ಗೆ ತಾಗಿ ಅಲೆಕ್ಸ್ ಕ್ಯಾರಿ ಕೈಗೆ ಬಿದ್ದಿರುವುದು ಕಂಡುಬಂದಿದೆ. ಅದೇ ರೀತಿ ಆಕಾಶ್ ದೀಪ್ ಕ್ಯಾಚ್ ಹಿಡಿದರೂ ಮೈದಾನ ಬಿಟ್ಟು ಹೋಗಲಿಲ್ಲ. ಅವರೆಲ್ಲ ಸುಳ್ಳುಗಾರರು. ಮೊದಲು ಪ್ರಾಮಾಣಿಕವಾಗಿ ಆಡುವುದನ್ನು ಕಲಿಯಿರಿ. ಆಗ ಮಾತ್ರ ನೀವು ಗೆಲ್ಲುತ್ತೀರಿ. ನಾವು ಕೆಟ್ಟದಾಗಿ ಆಡಿದ್ದೇವೆ. ಅದಕ್ಕಾಗಿಯೇ ನಾವು ಸೋತಿದ್ದೇವೆ. ಯಾರಾದರೂ ಕೆಟ್ಟದಾಗಿ ಬ್ಯಾಟ್ ಮಾಡಬಹುದೇ? ಬನ್ನಿ ಇನ್ನೇನು ಐಪಿಎಲ್ ಆರಂಭವಾಗುತ್ತದೆ ಅಲ್ಲಿ ರನ್ ಗಳಿಸಿ ಎಂದು ವ್ಯಂಗ್ಯವಾಡಿದರು. ಸಕಾರಾತ್ಮಕ ಮನೋಭಾವದಿಂದ ಆಟವಾಡಿ. ಹೊಸ ವರ್ಷದಲ್ಲಾದರೂ ಟೀಮ್ ಇಂಡಿಯಾಗೆ ಅದೃಷ್ಟ ಒಲಿಯುತ್ತದೆಯೇ ಎಂದು ನೋಡಬೇಕು ಎಂದು ಸುದ್ದಿ ಸಂಸ್ಥೆ ಐಎಎನ್‌ಎಸ್ ಜೊತೆ ಸುರೀದಂರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ದೆಹಲಿಯ ಸುರೀಂದರ್ ಖನ್ನಾ, 1979-84 ರ ನಡುವೆ ಟೀಮ್ ಇಂಡಿಯಾ ಪರ 10 ಏಕದಿನ ಪಂದ್ಯಗಳನ್ನು ಆಡಿದರು ಮತ್ತು 176 ರನ್ ಗಳಿಸಿದರು. ಇನ್ನು ಆಸ್ಟ್ರೇಲಿಯಾ ಮತ್ತು ಟೀಮ್ ಇಂಡಿಯಾ ನಡುವಿನ ಅಂತಿಮ ಐದನೇ ಟೆಸ್ಟ್ ಸಿಡ್ನಿಯಲ್ಲಿ ನಡೆಯಲಿದೆ. ಈ ಪಂದ್ಯದ ವೇಳಾಪಟ್ಟಿಯನ್ನು ಜನವರಿ 3-7 ರ ನಡುವೆ ಅಂತಿಮಗೊಳಿಸಲಾಗಿದೆ. (ಏಜೆನ್ಸೀಸ್)