

ಮುಂಬೈ: 'ರಾಮ್ ತೇರಿ ಗಂಗಾ ಮೈಲಿ' ಸಿನಿಮಾ ಖ್ಯಾತಿಯ ಬಾಲಿವುಡ್ನ ಹಿರಿಯ ನಟ ರಾಜೀವ್ ಕಪೂರ್ ಇಂದು ಕೊನೆಯುಸಿರೆಳೆದಿದ್ದಾರೆ. ಚಿಂಪೂ ಎಂದೇ ಕರೆಯಲ್ಪಡುವ ರಾಜ್ ಕಪೂರ್ ಪುತ್ರ ರಾಜೀವ್ ಕಪೂರ್ 58ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ.
ನಟ ರಿಷಿ ಕಪೂರ್ ಅವರ ಸಹೋದರ ರಾಜೀವ್ ಕಪೂರ್. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ರಿಷಿ ಕಪೂರ್ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದರು. ಇಂದು(ಮಂಗಳವಾರ) ರಾಜೀವ್ ಕಪೂರ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ದಿ. ರಿಷಿ ಕಪೂರ್ರ ಪತ್ನಿ ನೀತು ಕಪೂರ್ ಇನ್ಸ್ಟಾಗ್ರಾಂನಲ್ಲಿ ಖಚಿತ ಪಡಿಸಿದ್ದಾರೆ.
'ಆಸ್ಮಾನ್', 'ಲವರ್ ಬಾಯ್', 'ಜಬಾರ್ದಸ್ತ್' ಮತ್ತು 'ಹಮ್ ತೋ ಚಲೇ ಪರ್ದೇಸ್' ಸೇರಿದಂತೆ ಅನೇಕ್ ಹಿಟ್ ಚಿತ್ರಗಳನ್ನು ನೀಡಿ ರಾಜೀವ್ ಕಪೂರ್ ಅಭಿಮಾನಿಗಳ ಮನಗೆದ್ದಿದ್ದರು.
ರಾಜೀವ್ ಕಪೂರ್ಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ರನಧೀರ್ ಕಪೂರ್ ಕರೆದೊಯ್ದರಾದರೂ ಅಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿತ್ತು. ಬಾಲಿವುಡ್ನ ನಟ-ನಟಿಯರು ಮತ್ತು ಅಭಿಮಾನಿಗಳು ರಾಜೀವ್ ಕಪೂರ್ರ ಫೋಟೋ ಹಂಚಿಕೊಳ್ಳುವ ಮೂಲಕ ಕಂಬನಿ ಮಿಡಿದಿದ್ದಾರೆ.