ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವುದನ್ನು ಖಂಡಿಸಿ ಇಂದು ವಿವಿಧ ಸಂಘಟನೆಗಳು ಕರ್ನಾಟಕ ಬಂದ್ ಕರೆ ನೀಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿವೆ. ಇದರ ನಡುವೆಯೂ CWMA ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸುವ ಮೂಲಕ ಕರ್ನಾಟಕಕ್ಕೆ ಶಾಕ್ ನೀಡಿದೆ.
ಶುಕ್ರವಾರ ನಡೆದ ಕರ್ನಾಟಕ ಬಂದ್ಗೆ ಕನ್ನಡ ಚಿತ್ರರಂಗ ಸಾಥ್ ನೀಡಿದ್ದು, ಸ್ಯಾಂಡಲ್ವುಡ್ನ ಹಲವು ಸೆಲೆಬ್ರಿಟಿಗಳು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಇನ್ನು ಇಂದು ನಡೆದ ಪ್ರತಿಭಟನೆಯಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಗೈರುಹಾಜರಿ ಎದ್ದು ಕಾಣುತ್ತಿತ್ತು, ಅವರು ಹೋರಾಟದಲ್ಲಿ ಯಾಕೆ ಭಾಗಿಯಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ತಾವು ಪ್ರತಿಭಟನೆಯಲ್ಲಿ ಭಾಗಿಯಾಗದೆ ಇರುವ ಕುರಿತು ಸ್ಪಷ್ಟನೆ ನೀಡಿರುವ ನಟ ಜಗ್ಗೇಶ್ ಸಿಟಿ ಸ್ಕ್ಯಾನ್ ಮಾಡಿಸುತ್ತಿರುವ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿಟಿ ಸ್ಕ್ಯಾನ್ ಮಾಡಿಸುತ್ತಿರುವ ಕಾರಣವನ್ನೂ ತಿಳಿಸಿದ್ದಾರೆ.
ಇದನ್ನೂ ಓದಿ: VIDEO| ಲೈವ್ ಶೋನಲ್ಲಿ ಹೊಡೆದಾಡಿಕೊಂಡ ಅತಿಥಿಗಳು; ಇದು ನಾಚಿಕಗೇಡಿನ ವಿಷಯವೆಂದ ನೆಟ್ಟಿಗರು
L4L5 compression ಆಗಿ ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲು ಭಾಗಿಯಾಗಲು ಸಾಧ್ಯವಾಗಲಿಲ್ಲಾ. 2ವಾರ pysiyo ಚಿಕಿತ್ಸೆ ಹಾಗೂ ವೈದ್ಯರು ಕಡ್ಡಾಯವಾಗಿ ಬೆಡ್ರೆಸ್ಟ್ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನಟ ಜಗ್ಗೇಶ್ ತಮ್ಮ ಆರೋಗ್ಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಕೇದಾರ್ನಾಥ್-ಬದ್ರಿನಾಥ್ ಯಾತ್ರೆಗೆ ನಟ ಜಗ್ಗೇಶ್ ತೆರಳಿದ್ದರು. ಅಲ್ಲಿ ಬೆಟ್ಟ ಹತ್ತಿ ಇಳಿದ ಕಾರಣ ಹಾಗೂ ಸತತ ಪ್ರಯಾಣ, ನಡೆದಾಟದ ಕಾರಣದಿಂದ ಜಗ್ಗೇಶ್ಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಬೆನ್ನು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಜಗ್ಗೇಶ್ ವೈದ್ಯರ ಸಲಹೆ ಮೇರೆಗೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ಗೆ ಒಳಗಾಗಿದ್ದಾರೆ.
ನಟ ಜಗ್ಗೇಶ್ ನಟನೆಯ ತೋತಾಪುರಿ-2 ಚಿತ್ರ ಗುರುವಾರ (ಸೆಪ್ಟೆಂಬರ್ 28)ರಂದು ತೆರೆ ಕಂಡಿತ್ತು. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಜಗ್ಗೇಶ್ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೇ, ಶುಕ್ರವಾರ (ಸೆಪ್ಟೆಂಬರ್ 29)ರಂದು ನಡೆದ ಕಾವೇರಿ ಹೋರಾಟದಲ್ಲಿಯೂ ಅವರು ಭಾಗಿಯಾಗಿರಲಿಲ್ಲ. ಇದು ಹಲವರಲ್ಲಿ ಪ್ರಶ್ನೆ ಮೂಡಿಸಿತ್ತು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ನಟ ಜಗ್ಗೇಶ್ ಸಿನಿಮಾ ಪ್ರಚಾರ ಹಾಗೂ ಕಾವೇರಿ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ ಎಂಬುದು ಈಗ ಖಾತ್ರಿಯಾಗಿದೆ.