ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದು, ಪವಿತ್ರಾ ಗೌಡ, ಅನುಕುಮಾರ್ ಹೊರತುಪಡಿಸಿ ಪ್ರಕರಣದ ಉಳಿದ ಆರೋಪಿಗಳು ಜಾಮೀನು ಅರ್ಜಿ ಸಲ್ಲಿಸಿಲ್ಲ. ಇಂದಿಗೆ (ಸೆಪ್ಟೆಂಬರ್ 12) ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಲಿದ್ದು, ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇಂದು ಅರ್ಜಿ ವಿಚಾರಣೆ ನಡೆಸಲಿದ್ದು, ಬಳ್ಳಾರಿ ಜೈಲಿನ ಹೈ-ಸೆಕ್ಯುರಿಟಿ ಸೆಲ್ನಿಂದ ನಟ ದರ್ಶನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲಿದ್ದಾರೆ. ದರ್ಶನ್ಗಾಗಿ ಜೈಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡಿದ್ದಾರೆ. 12 ಗಂಟೆ ಬಳಿಕ ಕೋರ್ಟ್‌ಗೆ ರೇಣುಕಾಸ್ವಾಮಿ A-2 ಕೊಲೆ ಆರೋಪಿ ದರ್ಶನ್ ಕೋರ್ಟ್‌ಗೆ ಹಾಜರಾಗಲಿದ್ದಾರೆ.
ಸೆಪ್ಟೆಂಬರ್ 9ರಂದು ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಂಡಿತ್ತು. ಹೀಗಾಗಿ, ಅವರನ್ನು ಕೋರ್ಟ್ ಎದುರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು. ಈ ವೇಳೆ ಚಾರ್ಜ್ಶೀಟ್ ಪ್ರತಿಯನ್ನು ಆರೋಪಿ ಪರ ವಕೀಲರಿಗೆ ನೀಡಲಾಗಿತ್ತು. ಆ ಬಳಿಕ ಜಡ್ಜ್ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 12ರವರೆಗೆ ವಿಸ್ತರಣೆ ಮಾಡಿದ್ದರು.
ಇದನ್ನೂ ಓದಿ: ಮುಖವಾಡ ಹಾಕಿದ ಫೇಕ್ ಜನರು ವರ್ಚಸ್ಸನ್ನು ಕಾಯ್ದುಕೊಳ್ಳಬೇಕು ಆದರೆ…: ನಟಿ ರಚಿತಾ ರಾಮ್
ಸೆಪ್ಟೆಂಬರ್ 9ರಂದು ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿದ್ದ ಸರ್ಕಾರಿ ಪರ ವಕೀಲ ಪ್ರಸನ್ನ ಕುಮಾರ್ ಅವರು ಪ್ರಕರಣಕ್ಕೆ ಸಂಬಂಧಿಸಿ ಪ್ರಾಥಮಿಕ ಸಾಕ್ಷ್ಯಾಧಾರಗಳ ಸಲ್ಲಿಕೆ ಮಾಡಿದ್ದರು. ಇವುಗಳನ್ನು ಜಡ್ಜ್ ಪರಿಶೀಲನೆ ಮಾಡುವುದಾಗಿ ಹೇಳಿದ್ದರು. ಪೂರ್ತಿ ಚಾರ್ಜ್ಶೀಟ್ ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ದರ್ಶನ್ ಪರ ವಕೀಲರು ಹೇಳಿದ್ದರು. ಇನ್ನು ಶೀಘ್ರವೇ ದರ್ಶನ್ ಅವರು ಜಾಮೀನು ಅರ್ಜಿ ಸಲ್ಲಿಕೆ ಮಾಡಲಿದ್ದಾರೆ.
ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನ್ಯಾಯಾಲಯಕ್ಕೆ 3991 ಪುಟಗಳ ಚಾರ್ಜ್ಶೀಟ್ಅನ್ನು ಸಲ್ಲಿಸಿದ್ದು, ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಹೇಳಿಕೆ ಉಲ್ಲೇಖ ಮಾಡಲಾಗಿದೆ. ಚಾರ್ಜ್ಶೀಟ್ನ ಒಂದೊಂದು ಪುಟ ತೆರೆದಂತೆ ಆರೋಪಿಗಳ ಕರಾಳ ಕೃತ್ಯ ಬೆಳಕಿಗೆ ಬರುತ್ತಿದ್ದು, ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ಪ್ರಸಾರ ಮಾಡದಂತೆ ನಟ ದರ್ಶನ್ ಹೈಕೋರ್ಟ್ನಿಂದ ಸ್ಟೇ ತಂದಿದ್ದಾರೆ.