ಮಾಹಿತಿ ಹಕ್ಕು ಅರ್ಜಿಗಳ ತ್ವರಿತ ವಿಲೆವಾರಿಗೆ ಕ್ರಮ ವಹಿಸಲಾಗುವುದು : ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ

Untitled design - 2025-09-20T172118.242 (1)
Published on

ಚಿಕ್ಕಬಳ್ಳಾಪುರ: ಮಾಹಿತಿ ಹಕ್ಕು ಕಾಯ್ದೆಯಡಿಯ ದ್ವಿತೀಯ ಮೇಲ್ಮನವಿ ಅರ್ಜಿಗಳನ್ನು ತ್ವರಿತವಾಗಿ ವಿಲೆವಾರಿ ಮಾಡಿ ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಜಿಲ್ಲಾ ಮಟ್ಟದಲ್ಲಿಯೇ ಅದಾಲತ್ ಹಮ್ಮಿಕೊಳ್ಳುವ ಬಗ್ಗೆ ಆಯೋಗ ಚಿಂತನೆ ನಡೆಸಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ 7 ತಿಂಗಳ ಹಿಂದೆ ರಾಜ್ಯ ಮಾಹಿತಿ ಆಯೋಗದಲ್ಲಿ ಸುಮಾರು 54 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೆವಾರಿಯಾಗದೆ ಹಾಗೆ ಉಳಿದಿದ್ದವು, ಆ ಎಲ್ಲ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಿ, ಅರ್ಜಿದಾರರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಹಲವು ಕ್ರಮಗಳನ್ನು ಆಯೋಗ ಈಗಾಗಲೇ ತೆಗೆದುಕೊಂಡಿದ್ದು, 12,896 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಉಳಿದಿರುವ 41,104 ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಪಡಿಸುವ ಉದ್ದೇಶದೊಂದಿಗೆ ಮಾಹಿತಿ ಆಯುಕ್ತರೇ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಿ, ಸ್ಥಳದಲ್ಲೆ ಅರ್ಜಿದಾರರಿಗೆ ಮಾಹಿತಿ ತಲುಪಿಸುವ ಕಾರ್ಯವನ್ನು ಕನ್ನಡ ರಾಜ್ಯೋತ್ಸವದ ವೇಳೆಗೆ ಆರಂಭಿಸುವ ಭರವಸೆ ನೀಡಿದರು.

ರಾಜ್ಯದಲ್ಲಿ ಪ್ರಸ್ತುತವಾಗಿ ಪ್ರತಿ ತಿಂಗಳು ಸರಾಸರಿ 1500 ಅರ್ಜಿಗಳು ಆಯೋಗಕ್ಕೆ ಸಲ್ಲಿಕೆಯಾಗುತ್ತಿದ್ದು, ಈ ಅರ್ಜಿಗಳನ್ನು ಸಹ ಆದಷ್ಟು ಬೇಗ ಇತ್ಯರ್ಥ ಪಡಿಸುವುದರೊಂದಿಗೆ, ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ತರಲು ಆಯೋಗ ನಿರ್ಧರಿಸಿದೆ. 2005ರಲ್ಲಿ ಜಾರಿಗೆ ಬಂದಿರುವ ಮಾಹಿತಿ ಹಕ್ಕು ಕಾಯ್ದೆ ಭ್ರಷ್ಟಾಚಾರ ನಿವಾರಣೆಗೆ ಹೆಚ್ಚು ಸಹಕಾರಿಯಾಗಿದೆ ಎಂದರು.

10 ಕೋಟಿಗೂ ಹೆಚ್ಚು ದಂಡ

ರಾಜ್ಯದಲ್ಲಿ ಸರಿಯಾಗಿ ಮಾಹಿತಿ ನೀಡದ 10,699 ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಗಳಿಗೆ ಈವರೆಗೆ 10,08,46,450 ರೂಪಾಯಿ ದಂಡ ವಿಧಿಸಲಾಗಿದ್ದು, ಈ ಪೈಕಿ 2119 ಅಧಿಕಾರಿಗಳು 2.45 ಕೋಟಿ ದಂಡ ಪಾವತಿಸಿದ್ದಾರೆ, ಉಳಿದ ಅಧಿಕಾರಿಗಳಿಗೆ ದಂಡ ಪಾವತಿಸುವಂತೆ ಸೂಚಿನೆ ನೀಡಿ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ ಎಂದು ರುದ್ರಣ್ಣ ಹರ್ತಿಕೋಟೆ ತಿಳಿಸಿದರು.

ಮಾಹಿತಿ ಆಯುಕ್ತ ರಾಜಶೇಖರ .ಎಸ್ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾಹಿತಿ ಹಕ್ಕು ಅರ್ಜಿಗಳ ವಿಲೆವಾರಿ ಉತ್ತಮವಾಗಿದ್ದು. ಕಳೆದ ಏಪ್ರಿಲ್ ನಿಂದ ಈ ವರೆಗೆ 10,777 ಮಾಹಿತಿ ಹಕ್ಕು ಅರ್ಜಿಗಳು ಸಲ್ಲಿಕೆಯಾಗಿವೆ ಅದರಲ್ಲಿ 9,837 ರಷ್ಟು ಅರ್ಜಿಗಳು ವಿಲೆವಾರಿಯಾಗಿ 772 ಅರ್ಜಿಗಳು ಮಾತ್ರ ಬಾಕಿ ಇವೆ. ಜಿಲ್ಲೆಯಲ್ಲಿ ಸ್ವೀಕಾರಗೊಂಡಿರುವ ಮಾಹಿತಿ ಅರ್ಜಿಗಳ ಪೈಕಿ ಪಂಚಾಯತ್ ರಾಜ್ ಇಲಾಖೆಯಡಿ 368, ಕಂದಾಯ ಇಲಾಖೆಯಡಿ 212, ಸಮಾಜ ಕಲ್ಯಾಣ ಇಲಾಖೆಯಡಿ 33, ನಾಗರಾಭಿವೃದ್ಧಿ ಇಲಾಖೆಯಡಿ 31, ಜಲ ಸಂಪನ್ಮೂಲ ಇಲಾಖೆಯಡಿ 21, ಕೃಷಿ ಇಲಾಖೆಯ 19, ಅರಣ್ಯ ಇಲಾಖೆಯಡಿ 18, ಲೋಕೋಪಯೋಗಿ ಇಲಾಖೆಯಡಿ 17 ಅರ್ಜಿಗಳಿವೆ ಹಾಗೂ ಇತರ ಇಲಾಖೆಗಳಲ್ಲಿ ಪ್ರಕರಣಗಳು ಬಾಕಿ ಇವೆ. ಈ ಎಲ್ಲಾ ಅರ್ಜಿಗಳನ್ನು ಕಾಲಮಿತಿಯಲ್ಲಿ ಇತ್ಯರ್ಥ ಪಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ವೈ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಡಿ.ಹೆಚ್ ಅಶ್ವಿನ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷಾ ಹಾಗೂ ವಿವಿಧ ಇಲಾಖೆಯ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net