ವರದಿ ಆಧರಿಸಿ ಪಕ್ಷ ಬಲವರ್ಧನೆಗೆ ಕ್ರಮ: ವಿ.ಎಸ್.ಉಗ್ರಪ್ಪ

mng_Ugrappa
Published on

ವಿಜಯವಾಣಿ ಸುದ್ದಿಜಾಲ ಮಂಗಳೂರು: ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನಗಳು ದೊರೆತಿಲ್ಲ. ಸೋಲಿನ ಕಾರಣಗಳ ಕುರಿತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಸತ್ಯಶೋಧನಾ ಸಮಿತಿ ರಚನೆ ಮಾಡಲಾಗಿದ್ದು, ಈ ಸಮಿತಿ ವರದಿ ಆಧಾರದ ಮೇಲೆ ಮತ್ತೆ ಪಕ್ಷವನ್ನು ಬಲಯುತಗೊಳಿಸಲಾಗುವುದು ಎಂದು ಕಾಂಗ್ರೆಸ್‌ನ ಮಂಗಳೂರು ವಿಭಾಗ(ಮಲೆನಾಡು ಪ್ರದೇಶ)ದ ಸತ್ಯಶೋಧನಾ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.

ಕಾಂಗ್ರೆಸ್ ಸೋಲಿನ ಪರಾಮರ್ಶೆಗಾಗಿ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸನ್ನು ಮರಳಿ ಸದೃಢ ಮಾಡುವ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಕಾರಣ ತಿಳಿಯುವ ಉದ್ದೇಶದಿಂದ ಸತ್ಯಶೋಧನಾ ವರದಿ ಅನುಷ್ಠಾನಗೊಳಿಸಲಾಗುವುದು. ಸೋಲಿಗೆ ಕಾರಣ ಹುಡುಕಿ, ಪಕ್ಷ ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಸಮಗ್ರ ವರದಿ ಸಲ್ಲಿಸಲಾಗುತ್ತದೆ. ಅದರ ಆಧಾರದಲ್ಲಿ ಪಕ್ಷ ಸಂಘಟನೆ ವೃದ್ಧಿ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತದೆ. ಆದರೆ ಈ ವರದಿಯ ಅಂಶಗಳನ್ನು ಬಹಿರಂಗಗೊಳಿಸಲಾಗದು ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಸೋಲು

ದೇಶದಲ್ಲಿ ಇಂಡಿಯಾ ಒಕ್ಕೂಟ 300 ಸೀಟ್ ಗೆಲ್ಲುವ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ 20 ಸೀಟ್ ಗೆಲ್ಲುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಮತದಾರರು ವ್ಯತಿರಿಕ್ತ ತೀರ್ಪು ನೀಡಿದ್ದಾರೆ. ಬಿಜೆಪಿಗೂ ವ್ಯತಿರಿಕ್ತ ತೀರ್ಪನ್ನೇ ನೀಡಿದ್ದಾರೆ. ಈ ಸೋಲು ಕಾಂಗ್ರೆಸ್‌ಗೆ ಮಾತ್ರ ಉಂಟಾದ ಸೋಲಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಗಿರುವ ಸೋಲು. ಸಂವಿಧಾನಕ್ಕೆ ಅಪಚಾರ ಎಸಗಿರುವ ಮೋದಿ ಮತ್ತವರ ತಂಡವನ್ನು ಸೋಲಿಸಬೇಕಿತ್ತು ಎಂದರು.

ರಾಜ್ಯದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಪಡೆದಿದ್ದು, ಈ ಬಾರಿ 9 ಸ್ಥಾನಗಳನ್ನು ಗೆದ್ದಿದ್ದೇವೆ. ಹಾಗಾಗಿ ಈ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆ ಪರಿಣಾಮವನ್ನೇ ಬೀರಿಲ್ಲ ಎಂದು ಹೇಳಲಾಗದು. ಕಾಂಗ್ರೆಸ್‌ನ ಅನೇಕ ಅಭ್ಯರ್ಥಿಗಳು ಅತಿ ಕಡಿಮೆ ಓಟುಗಳ ಅಂತರದಲ್ಲಿ ಸೋತಿದ್ದಾರೆ. ಸೋಲನ್ನು ಸ್ವೀಕರಿಸಿ ವಿಮರ್ಶೆಗೆ ಒಳಪಡಿಸಿ ಮತ್ತೆ ಪಕ್ಷ ಕಟ್ಟುವಲ್ಲಿ ತೊಡಗಿಕೊಳ್ಳಲಿದ್ದೇವೆ ಎಂದರು.

ಕಾಂಗ್ರೆಸ್ ಮುಖಂಡರಾದ ರಮಾನಾಥ ರೈ, ಹರೀಶ್ ಕುಮಾರ್, ಐವನ್ ಡಿಸೋಜ, ಪದ್ಮರಾಜ್ ಆರ್., ಎಂ.ಎಸ್.ಮೊಹಮ್ಮದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net