

ವಿಜಯವಾಣಿ ಸುದ್ದಿಜಾಲ ಮಂಗಳೂರು: ಮಂಗಳೂರು ನಗರದಲ್ಲಿ ಜನರ ಆರೋಗ್ಯ ಹಾಳು ಮಾಡುವ ಅನಧಿಕೃತ ಬೀದಿ ವ್ಯಾಪಾರವನ್ನು ಪಾಲಿಕೆ ಆಡಳಿತ ಸೋಮವಾರ ಟೈಗರ್ ಕಾರ್ಯಾಚರಣೆ ಮೂಲಕ ತೆರವುಗೊಳಿಸಲು ಆರಂಭಿಸಿದೆ.
ರಸ್ತೆ ಬದಿಯ ಗೂಡಂಗಡಿಗಳಲ್ಲಿ ಕಳಪೆ ಆಹಾರ ಪದಾರ್ಥ ಸಹಿತ ಅನಧಿಕೃತ ಬೀದಿ ವ್ಯಾಪಾರ ಹೆಚ್ಚುತ್ತಿದೆ. ಇದರಿಂದ ಸಾರ್ವಜನಿಕ ಪ್ರಯಾಣಿಕರ ಓಡಾಟವಲ್ಲದೆ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿರುವ ಬಗ್ಗೆ ದೂರುಗಳು ಬರುತ್ತ್ತಿವೆ. ಈ ಹಿನ್ನೆಲೆಯಲ್ಲಿ ಜು.29ರಿಂದ ಟೈಗರ್ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಜು.25ರಂದು ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಮೇಯರ್ ಸುಧೀರ್ ಶೆಟ್ಟಿ ತಿಳಿಸಿದ್ದರು. ಅಅದರಂತೆ ಸೋಮವಾರ ಕಾರ್ಯಾಚರಣೆ ಆರಂಭಗೊಂಡಿದೆ.
ಪಾಲಿಕೆ ವ್ಯಾಪ್ತಿಯ ಮಣ್ಣಗುಡ್ಡ, ಲಾಲ್‌ಬಾಗ್, ಲೇಡಿಹಿಲ್, ಬಿಜೈ, ಕೆಪಿಟಿ, ನಾಗುರಿ, ಪದವಿನಂಗಡಿ, ಯೆಯ್ಯಡಿ, ಕಾವೂರು ಸಹಿತ ಹಲವು ಕಡೆ 50ಕ್ಕೂ ಅಧಿಕ ಬೀದಿ ಬದಿ ವ್ಯಾಪಾರವನ್ನು ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ವೇಳೆ ಬೀದಿಬದಿ ವ್ಯಾಪಾರಿಗಳ ಸಂಘವು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿರೋಧ ಒಡ್ಡಿದೆ. ಬರ್ಕೆ ಠಾಣೆಯ ಮುಂದೆ ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರಿಂದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಡೀಲ್ ಸಮೀಪದ ನಾಗುರಿಯಲ್ಲಿ ಕಾರ್ಯಾಚರಣೆ ವೇಳೆ ಪ್ರತಿಭಟಿಸಿದ 15 ಮಂದಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಕಿದ್ದರೂ ಅದಕ್ಕೆ ಅದರದ್ದೇ ಆದ ನಿಯಮವಿದೆ. ಆದರೆ ಸೋಮವಾರ ಪಾಲಿಕೆ ನಡೆಸಿದ ಕಾರ್ಯಾಚರಣೆ ವೇಳೆ ಈ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಅಧಿಕಾರಿಗಳು ವ್ಯಾಪಾರಿಗಳ ತಳ್ಳುಗಾಡಿ, ಸಾಮಗ್ರಿಗಳಿಗೆ ಹಾನಿಗೊಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅನಧಿಕೃತವಾಗಿ ವ್ಯಾಪಾರ ನಡೆಸಿದ್ದೇ ತಪ್ಪು, ಇನ್ನು ಟೈಗರ್ ಕಾರ್ಯಾಚರಣೆ ಹೀಗೆಯೇ ಮಾಡಬೇಕು ಎಂಬ ನಿಯಮ ಇಲ್ಲ. ತೆರವುಗೊಳಿಸುವಾಗ ಸಾರ್ವಜನಿಕ ಸೊತ್ತು, ಪ್ರಾಣ ಹಾನಿಯಾಗದಂತೆ ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ನಡೆಸುವ ಬಗ್ಗೆ ಈ ಹಿಂದೆ ಹಲವು ಬಾರಿ ಸೂಚನೆ ನೀಡಿದರೂ ಅನಧಿಕೃತ ಬೀದಿ ಬದಿ ವ್ಯಾಪಾರಿಗಳು ಕ್ಯಾರೆ ಮಾಡಿಲ್ಲ. ಮುಂದಿನ ದಿನಗಳಲ್ಲಿ ಅನಧಿಕೃತ ಬೀದಿ ವ್ಯಾಪಾರ ತೆರವು ನಿರಂತರ ನಡೆಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.