

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಎಳವೆಯಲ್ಲಿ ಶೈಕ್ಷಣಿಕ ಸಾಧನೆ ಮಾಡುವುದು ಭವಿಷ್ಯದ ಉನ್ನತಿಗೆ ಕೈಗನ್ನಡಿಯಾಗುತ್ತದೆ. 10ನೇ ತರಗತಿಯಲ್ಲಿ ಉನ್ನತ ಅಂಕ ಪಡೆದು ಗುರುತಿಸಿಕೊಳ್ಳುವುದರಿಂದ ಮುಂದೆ ಮತ್ತಷ್ಟು ಸಾಧನೆಗೆ ಮನಸು ಮಾಡುತ್ತಾರೆ. ಶೈಕ್ಷಣಿಕ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಅವರಿಗೆ ಮತ್ತಷ್ಟು ಸಾಧನೆ ಮಾಡಲು ಪ್ರೇರಣೆಯಾಗುತ್ತದೆ ಹಾಗೂ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುತ್ತದೆ ಎಂದು ಶ್ರೀ ಸುಬ್ರಹ್ಮಣ್ಯ ಮಠದ ದಿವಾನ, ಸುಬ್ರಹ್ಮಣ್ಯ ಮಠ ಎಜುಕೇಶನ್ ಟ್ರಸ್ಟ್ ಸಂಚಾಲಕ ಸುದರ್ಶನ ಜೋಯಿಸ ಹೇಳಿದರು.
ಶ್ರೀ ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿ ಆಡಳಿತದ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯಲ್ಲಿ 2024-25ನೇ ಸಾಲಿನಲ್ಲಿ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಭಾನುವಾರ ಗೌರವಿಸಿ ಮಾತನಾಡಿದರು.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದ ಪೂರ್ಣೇಶ್ ಹಾಗೂ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಮತ್ತು ಡ್ರಾಯಿಂಗ್ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಬಿಳಿನೆಲೆ ಗ್ರಾಪಂ ಅಧ್ಯಕ್ಷೆ ಶಾರದಾ ದಿನೇಶ್ ಮುಖ್ಯ ಅತಿಥಿಯಾಗಿದ್ದರು. ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ, ಶಾಲಾ ಮುಖ್ಯಶಿಕ್ಷಕ ಸತ್ಯಶಂಕರ ಭಟ್ ಎಂ., ವೇದವ್ಯಾಸ ವಿದ್ಯಾಲಯದ ಮುಖ್ಯಗುರು ಪ್ರಶಾಂತ್ ಬಿ. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಕೊಡೆಗಳನ್ನು ವಿತರಿಸಲಾಯಿತು. ಶಿಕ್ಷಕ ಉಮೇಶ್ ವಂದಿಸಿದರು. ಚಿತ್ರಕಲಾ ಶಿಕ್ಷಕ ದಿನೇಶ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು.