ಅಮ್ಚಿನಡ್ಕ ಪ್ರದೇಶದಲ್ಲಿ ಕಾಡಾನೆ ಉಪಟಳ: ಬಾಳೆ, ಅಡಕೆ, ತೆಂಗಿನ ಸಸಿಗಳು ಚಿಂದಿ

New Project (34)
Published on

ಪುತ್ತೂರು ಗ್ರಾಮಾಂತರ: ಮಾಡ್ನೂರು ಗ್ರಾಮದ ಅಮ್ಚಿನಡ್ಕ ಸಮೀಪದ ಮುಖಾರಿಮೂಲೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಎರಡು ಕಾಡಾನೆಗಳು ಲಗ್ಗೆಯಿಟ್ಟು ಕೃಷಿಕರ ತೋಟಗಳನ್ನು ಹಾನಿಗೈದಿದೆ.

ಮುಖಾರಿಮೂಲೆ ವ್ಯಾಪ್ತಿಯ ಕೃಷಿಕರಾದ ಇಸುಬು ಹಾಜಿ, ಬೀರಾ ಮೋಯ್ದಿನ್, ಇಬ್ರಾಹಿಂ, ಹಸೈನಾರ್ ಮತ್ತು ಅಬ್ದುಲ್ ರರಝಾಕ್ ಎಂಬುವರ ಕೃಷಿ ತೋಟಗಳಿಗೆ ಕಾಡಾನೆಗಳು ನುಗ್ಗಿ ಬಾಳೆ, ಅಡಕೆ, ತೆಂಗಿನ ಸಸಿಗಳನ್ನು ನಾಶ ಮಾಡಿ ಅಪಾರ ನಷ್ಟ ಉಂಟು ಮಾಡಿವೆ.

ಕಳೆದ ಭಾನುವಾರ ರಾತ್ರಿ ಪೆರ್ನಾಜೆ ವ್ಯಾಪ್ತಿಗೆ ಕಾಲಿಟ್ಟು ಕೃಷಿನಾಶ ಮಾಡಿದ್ದ ಕಾಡಾನೆಗಳು, ಮರುದಿನ ಸೋಮವಾರ ರಾತ್ರಿ ನೂಜಿಬೈಲು ವ್ಯಾಪ್ತಿಗೆ ತೆರಳಿ ಕೃಷಿ ನಾಶ ಮಾಡಿದ್ದವು. ಇದೀಗ ಅಮ್ಚಿನಡ್ಕ ಸಮೀಪದ ಮುಖಾರಿಮೂಲೆಗೆ ಪಯಣ ಬೆಳೆಸಿ ಕೃಷಿ ನಾಶ ಮಾಡಿವೆ. ಕಳೆದ ಡಿಸೆಂಬರ್ ತಿಂಗಳಲ್ಲಿ ನಿರಂತರವಾಗಿ ಕಾಡಾನೆಗಳು ಪೆರ್ನಾಜೆಯಿಂದ ನೂಜಿಬೈಲು, ಅಲ್ಲಿಂದ ಅಮ್ಚಿನಡ್ಕ ಮುಖಾರಿಮೂಲೆಗೆ ಬಂದು ಕೃಷಿ ನಾಶ ಮಾಡಿದ್ದವು. ಇದೀಗ ಮತ್ತೆ ಕಾಡಾನೆಗಳ ಹಾವಳಿ ಆರಂಭಗೊಂಡಿರುವುದರಿಂದ ಈ ಭಾಗದ ಕೃಷಿಕರು ಕಂಗಾಲಾಗಿದ್ದಾರೆ. ಅಪಾಯ ಸಂಭವಿಸುವ ಮೊದಲೇ ಕಾಡಾನೆಗಳನ್ನು ಹಿಡಿದು ಸುರಕ್ಷಿತವಾಗಿ ಬೇರೆ ಕಡೆಗೆ ಸ್ಥಳಾಂತರಿಸಬೇಕು. ಕೃಷಿ ಹಾನಿಗೊಂಡಿರುವ ಕೃಷಿಕರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಈ ಭಾಗದ ಕೃಷಿಕರು ಆಗ್ರಹಿಸಿದ್ದಾರೆ. ಕಾಡಾನೆಗಳ ಹಾವಳಿ ತಡೆಗೆ ಸೂಕ್ತ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಕುರಿತು ಸ್ಥಳೀಯ ಶಾಸಕರಿಗೆ, ದ.ಕ. ಜಿಲ್ಲಾಧಿಕಾರಿಗೆ ಹಾಗೂ ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.

ಮದ್ಲದಲ್ಲಿ ಒಂಟಿ ಸಲಗ ಹಾವಳಿ

ಮಾಡ್ನೂರು ಗ್ರಾಮದ ಮದ್ಲದ ಕೃಷಿಕ ಪ್ರವೀಣ್ ಬೋರ್ಕರ್ ಎಂಬುವರ ಕೃಷಿ ತೋಟಕ್ಕೆ ಸೋಮವಾರ ಮತ್ತು ಮಂಗಳವಾರ ರಾತ್ರಿ ನಿರಂತರವಾಗಿ ಒಂಟಿ ಕಾಡಾನೆಯೊಂದು ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿದೆ. ಪೆರ್ನಾಜೆ ವ್ಯಾಪ್ತಿಯಲ್ಲಿರುವ ಎರಡು ಕಾಡಾನೆಗಳಿದ್ದರೆ, ಪೂವಂದೂರು ಚಾಕೋಟೆ ವ್ಯಾಪ್ತಿಯಲ್ಲಿ ಪ್ರತ್ಯೇಕವಾಗಿ ಒಂಟಿ ಕಾಡಾನೆ ಇದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಇಂದು ಸಂತ್ರಸ್ತ ಕೃಷಿಕರ ಸಭೆ

ಮಾಡ್ನೂರು ಗ್ರಾಮದ ಅಮ್ಚಿನಡ್ಕ, ಪೂವಂದೂರು, ತೋಟದಮೂಲೆ ವ್ಯಾಪ್ತಿಯಲ್ಲಿ ಕಾಡಾನೆ ಉಪಟಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಿಯಡ್ಕ ಗ್ರಾಪಂ ವತಿಯಿಂದ ಜೂನ್ 5ರಂದು ಸಂಜೆ 3ಕ್ಕೆ ಕಾವು ಸಮುದಾಯ ಭವನದಲ್ಲಿ ಕಾಡಾನೆಯಿಂದಾಗಿ ಕೃಷಿ ಹಾನಿಗೊಳಗಾದ ಹಾಗೂ ಈ ಪ್ರದೇಶಗಳ ಕೃಷಿಕರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಗುವುದು. ಸಂತ್ರಸ್ತ ಕೃಷಿಕರು ಸಲಹೆ ಸೂಚನೆಗಳನ್ನು ನೀಡಬೇಕೆಂದು ಅರಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net