VIDEO| ವಿಚಾರಣೆ ವೇಳೆ 'ಐ ಲವ್​ ಯು' ಎಂದ ಆರೋಪಿ: ಜಡ್ಜ್​ ಪ್ರತಿಕ್ರಿಯಿಸಿದ ರೀತಿಗೆ ಭಾರಿ ಮೆಚ್ಚುಗೆ!

Judge
Published on

ವಾಷಿಂಗ್ಟನ್​: ಯಾರಿಗೆ? ಯಾರ ಮೇಲೆ? ಯಾವಾಗ ಪ್ರೇಮಾಂಕುರವಾಗುತ್ತದೆ ಎಂದು ಹೇಳಲಾಗದು. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಇಲ್ಲೊಬ್ಬ ಆರೋಪಿಗೆ ಜಡ್ಜ್​ ಮೇಲೆಯೇ ಪ್ರೀತಿಯಾಗಿದ್ದು, ವಿಚಾರಣೆ ವೇಳೆಯೇ ಪ್ರೇಮ ನಿವೇದನೆ ಮಾಡಿರುವ ವಿರಳಾತಿವಿರಳ ಘಟನೆ ಅಮೆರಿಕದಲ್ಲಿ ನಡೆದಿದೆ.

ಪ್ರೇಮ ನಿವೇದನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ನಗೆಗಡಲಲ್ಲಿ ತೇಲುತ್ತಿದ್ದಾರೆ. ಅಲ್ಲದೆ, ಆರೋಪಿಯ ಎದೆಗಾರಿಕೆ ಕಂಡು ಹುಬ್ಬೇರಿಸುತ್ತಿದ್ದಾರೆ. ಜಡ್ಜ್​ ಪ್ರತಿಕ್ರಿಯೆಗೂ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ದರೋಡೆ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿಗೆ ಶಿಕ್ಷೆ ಪ್ರಕಟಿಸುವ ಸಮಯದಲ್ಲಿ ಈ ಘಟನೆ ನಡೆದಿದೆ. ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆಯುತ್ತಿದ್ದ ವೇಳೆ ಜಡ್ಜ್​ ಉದ್ದೇಶಿಸಿ ನೀವು ಸುಂದರವಾಗಿದ್ದೀರಾ... ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಆರೋಪಿ ಪ್ರೇಮ ನಿವೇದನೆ ಮಾಡಿದ್ದಾನೆ.

ಘಟನೆಯ ವಿವರಣೆಗೆ ಬರುವುದಾದರೆ, ಆರೋಪಿ ಡೆಮೆಟ್ರಿಸ್​ ಲೂಯಿಸ್​ ಎಂಬಾತ ಬ್ರೊವಾರ್ಡ್​ ಕೌಂಟಿ ಜಡ್ಜ್​ ತಬಿತಾ ಬ್ಲ್ಯಾಕ್​ಮನ್​ರವರು ಜೂಮ್​ ಕಾಲ್​ ಮೂಲಕ ಗುರುವಾರ ವಿಚಾರಣೆ ಕೈಗೆತ್ತಿಕೊಂಡಿದ್ದರು. ಮನೆಯೊಂದರ ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಲೂಯಿಸ್ ವಿಚಾರಣೆ ಎದುರಿಸಿದ್ದ. ಈ ವೇಳೆ ಜಡ್ಜ್​ ತಬಿತಾ ಅವರು ಶಿಕ್ಷೆ ಪ್ರಮಾಣ ಪ್ರಕಟಿಸುವ ಮುನ್ನವೇ ಮಾತು ಆರಂಭಿಸಿದ ಆರೋಪಿ ಲೂಯಿಸ್​, ಜಡ್ಜ್​ ನೀವು ತುಂಬಾ ಸುಂದರವಾಗಿದ್ದೀರಾ. ನಾನು ಏನು ಹೇಳುತ್ತೇನೆಂದರೆ ನಿಜಕ್ಕೂ ನೀವು ಸೌಂದರ್ಯವತಿ. ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಎರಡು ಬಾರಿ ಐ ಲವ್​ ಯು ಎಂದಿದ್ದಾನೆ.

ಆರೋಪಿ ಲೂಯಿಸ್​ ಅತಿ ಹೊಗಳಿಕೆಗೆ ಮರುಳಾಗದ ತಬಿತಾ ಅವರು ಎರಡು ಸೆಕೆಂಡ್​​ ಸುಮ್ಮನ್ನೇ ನಕ್ಕು ತಮ್ಮ ಕರ್ತವ್ಯ ಮುಂದುವರಿಸಿದರು. ನಿಮ್ಮ ಹೊಗಳಿಕೆ ಎಲ್ಲೆಡೆ ನಡೆಯುತ್ತದೆ. ಆದರೆ ಬಹುಶಃ ಇಲ್ಲಿ ನಡೆಯುವುದಿಲ್ಲ ಎಂದು ಲೂಯಿಸ್ ಕೇಸ್ ಫೈಲ್‌ಗಳನ್ನು ಪರಿಶೀಲಿಸುತ್ತಾ ಜಡ್ಜ್​ ತಬಿತಾ ಅವರು ಪ್ರತಿಕ್ರಿಯಿಸಿದರು.

ನ್ಯೂಯಾರ್ಕ್ ಪೋಸ್ಟ್ ವರದಿಯ ಪ್ರಕಾರ, ಲೂಯಿಸ್ ಈಗಾಗಲೇ ನಾಲ್ಕು ವರ್ಷಗಳ ಜೈಲುವಾಸವನ್ನು ಅನುಭವಿಸಿ 2019ರಲ್ಲಿ ಬಿಡುಗಡೆಯಾಗಿದ್ದಾನೆ. ಇದೀಗ ಮತ್ತೆ ದರೋಡೆ ಪ್ರಕರಣದಲ್ಲಿ ಬಂಧಿತನಾಗಿದ್ದು, ಶಿಕ್ಷೆಗೆ ಗುರಿಯಾಗಿದ್ದಾನೆ.

ಇನ್ನು ಜಡ್ಜ್​ ಮತ್ತು ಆರೋಪಿ ನಡುವಿನ ಸಂಭಾಷಣೆ ವಿಡಿಯೋ ವೈರಲ್​ ಆಗಿದ್ದು, ಸಾಕಷ್ಟು ಮಂದಿ ಕಾಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net