

ಉತ್ತರಕನ್ನಡ: ಆಂಬುಲೆನ್ಸ್ ಹಾಗೂ ಗ್ಯಾಸ್ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಂಬುಲೆನ್ಸ್ನಲ್ಲಿದ್ದ ರೋಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಾತ್ರವಲ್ಲ ಆಂಬುಲೆನ್ಸ್ ಚಾಲಕ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ರಾಮತೀರ್ಥ ಬಳಿ ಈ ಭೀಕರ ಅಪಘಾತ ಸಂಭವಿಸಿದೆ. ಆಂಬುಲೆನ್ಸ್ನಲ್ಲಿದ್ದ ರೋಗಿ ರಾಮಕೃಷ್ಣ ಗಣಪತಿ ಪ್ರಸಾದ (70) ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಆಂಬುಲೆನ್ಸ್ ಗೋಕರ್ಣದಿಂದ ಹೊನ್ನಾವರ ಕಡೆಗೆ ತೆರಳುತ್ತಿತ್ತು. ಗಾಯಾಳು ಚಾಲಕನನ್ನು ಹಾಗೂ ಆಂಬುಲೆನ್ಸ್ನಲ್ಲಿದ್ದ ಇನ್ನಿಬ್ಬರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.