ಕರೊನಾ ಟೆಸ್ಟ್​ ನೀವೇ ಮಾಡಿಕೊಳ್ಳಬಹುದು: ಪರೀಕ್ಷೆಗೆ ಎರಡೇ ನಿಮಿಷ, 15 ನಿಮಿಷಗಳಲ್ಲಿ ಫಲಿತಾಂಶ..

Untitled-1
Published on

ನವದೆಹಲಿ: ಕರೊನಾ ರೋಗಲಕ್ಷಣ ಕಾಣಿಸಿಕೊಂಡಲ್ಲಿ ಅಥವಾ ಕೋವಿಡ್-19 ಪಾಸಿಟಿವ್ ಇರಬಹುದೇ ಎಂಬ ಅನುಮಾನ ಕಾಡಿದಲ್ಲಿ ಇನ್ನುಮುಂದೆ ಟೆಸ್ಟ್​ ಮಾಡಿಸಿಕೊಳ್ಳಲು ಮನೆಯಿಂದ ಹೊರಗೆ ಹೋಗಬೇಕಾಗಿಲ್ಲ. ಅದು ಕೂಡ ವರ್ಕ್​ ಫ್ರಂ ಹೋಮ್ ರೀತಿಯ ಮನೆಯಲ್ಲೇ ಸಾಧ್ಯ. ಅದರಲ್ಲೂ ಕರೊನಾ ಟೆಸ್ಟ್​ ನೀವೇ ಪರೀಕ್ಷೆ ಮಾಡಿಕೊಳ್ಳಬಹುದು.

ಸ್ವತಃ ಪರೀಕ್ಷೆ ಮಾಡಿಸಿಕೊಳ್ಳಬಹುದಾದ ಕೋವಿಸೆಲ್ಫ್​ ಎಂಬ ರ್ಯಾಪಿಡ್​ ಆ್ಯಂಟಿಜೆನ್​ ಟೆಸ್ಟ್​(ಆರ್​ಎಟಿ) ಕಿಟ್​ವೊಂದನ್ನು ಪುಣೆಯಲ್ಲಿರುವ ಮೈಲ್ಯಾಬ್ ಡಿಸ್ಕವರಿ ಸಲ್ಯೂಷನ್ಸ್​ ಎಂಬ ಕಂಪನಿ ಕಂಡುಹಿಡಿದಿದೆ. ಈ ಕಿಟ್ ಮೂಲಕ 2 ನಿಮಿಷದಲ್ಲಿ ಕರೊನಾ ಟೆಸ್ಟ್ ಮಾಡಿಸಿಕೊಳ್ಳಲು ಸಾಧ್ಯವಿದ್ದು, 15 ನಿಮಿಷಗಳಲ್ಲೇ ಫಲಿತಾಂಶ ಕೂಡ ಲಭಿಸುತ್ತದೆ. ಈ ಟೆಸ್ಟ್​ ಕಿಟ್​ಗೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​ (ಐಸಿಎಂಆರ್​) ಮಾನ್ಯತೆ ಕೂಡ ಸಿಕ್ಕಿದೆ.

ಹೀಗೆ ಸ್ವಯಂಪರೀಕ್ಷೆ ಮಾಡಿಸಿಕೊಳ್ಳಬಹುದಾದ ಕೋವಿಸೆಲ್ಫ್​ ಟೆಸ್ಟ್​ ಕಿಟ್​ ಇನ್ನೊಂದು ವಾರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ದೇಶದಲ್ಲಿರುವ 7 ಲಕ್ಷಕ್ಕೂ ಅಧಿಕ ಫಾರ್ಮಸಿಗಳಲ್ಲಿ ಹಾಗೂ ಆನ್​ಲೈನ್​ ಫಾರ್ಮಸಿಗಳಲ್ಲೂ ಈ ಕಿಟ್​​ಗಳು ಸಿಗಲಿವೆ. ಭಾರತದ ಶೇ. 90ರಷ್ಟು ಪಿನ್​ಕೋಡ್ ಪ್ರದೇಶಗಳಿಗೆ ಈ ಕಿಟ್ ತಲುಪಿಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದು ಮೈಲ್ಯಾಬ್​ ಡಿಸ್ಕವರಿ ಸಲ್ಯೂಷನ್ಸ್​ ಕಂಪನಿಯ ನಿರ್ದೇಶಕ ಸುಜೀತ್ ಜೈನ್ ತಿಳಿಸಿದ್ದಾರೆ.

ಇದು ಸ್ವಯಂಬಳಕೆಗೆ ಮಾತ್ರ. ರೋಗಲಕ್ಷಣವಿದ್ದರೆ ಅಥವಾ ಸೋಂಕಿತರು ಎಂದು ಲ್ಯಾಬ್​ ಟೆಸ್ಟ್​ಗಳಿಂದ ದೃಢಪಟ್ಟವರ ಸಂಪರ್ಕಕ್ಕೆ ಬಂದಿದ್ದರೆ ಈ ಕಿಟ್​ ಮೂಲಕ ಪರೀಕ್ಷೆ ಮಾಡಿಕೊಳ್ಳಬಹುದು. ಈ ಟೆಸ್ಟ್​​ನಲ್ಲಿ ಪಾಸಿಟಿವ್ ಬಂದರೆ ಆರ್​ಟಿ-ಪಿಸಿಆರ್ ಟೆಸ್ಟ್ ಮಾಡಿಸಬೇಕಾದ ಅಗತ್ಯವಿಲ್ಲ. ಆದರೆ ರೋಗಲಕ್ಷಣಗಳಿದ್ದೂ ಈ ಟೆಸ್ಟ್​ನಲ್ಲಿ ನೆಗೆಟಿವ್ ಬಂದವರು ಆರ್​ಟಿ-ಪಿಸಿಆರ್ ಮಾಡಿಸಿಕೊಳ್ಳುವುದು ಅಗತ್ಯ. ವಯಸ್ಕರೆಲ್ಲರೂ ಮ್ಯಾನುಯಲ್ ನೋಡಿ ಈ ಕಿಟ್​ ಬಳಸಬಹುದು ಎಂದು ಐಸಿಎಂಆರ್​ ತಿಳಿಸಿದೆ.

ಕೋವಿಸೆಲ್ಫ್​ ಟೆಸ್ಟ್​ನಿಂದ ಬಂದ ಫಲಿತಾಂಶವನ್ನು ಗೂಗಲ್​ ಪ್ಲೇಸ್ಟೋರ್​ನಿಂದ ಡೌನ್​ಲೋಡ್ ಮಾಡಿಕೊಳ್ಳಲಾದ ಮೈ ಲ್ಯಾಬ್​ ಆ್ಯಪ್​ಗೆ ಅಪ್​ಲೋಡ್ ಮಾಡಬೇಕು. ಅಲ್ಲದೆ ಪರೀಕ್ಷೆ ಮಾಡಿಕೊಂಡವರು ಪರೀಕ್ಷೆ ಬಳಿಕ ಟೆಸ್ಟ್ ಸ್ಟ್ರಿಪ್​ ಫೋಟೋ ತೆಗೆದು ಅದನ್ನೂ ಅಪ್​ಲೋಡ್ ಮಾಡಬೇಕು. ಈ ಎಲ್ಲ ಮಾಹಿತಿ ಆ್ಯಪ್​ ಮುಖೇನ ಐಸಿಎಂಆರ್​ಗೆ ಕನೆಕ್ಟ್​ ಆಗಿರುವ ಸರ್ವರ್​ ಮೂಲಕ ಕೋವಿಡ್​ 19 ಟೆಸ್ಟಿಂಗ್ ಪೋರ್ಟಲ್​ನಲ್ಲಿ ದಾಖಲಾಗಲಿವೆ ಎಂದು ಐಸಿಎಂಆರ್​ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net