

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಹೂಳು ತುಂಬಿ ಆಟದ ಮೈದಾನದಂತೆ ಆಗಿದ್ದ ಕೆರೆಯೊಂದು ನಿರ್ವಹಣೆಗೊಂಡ ಪರಿಣಾಮ ಸಮೃದ್ಧ ಜಲರಾಶಿ ಹೊಂದಿದ್ದು ನೂರಾರು ಎಕರೆ ಕೃಷಿಭೂಮಿಗೆ ವರದಾನವಾಗಿದೆ. ಒಂದೆಡೆ ಬೆಳ್ಮಣ್ ಗ್ರಾಪಂ ಹಾಗೂ ಮತ್ತೊಂದೆಡೆ ಮುದರಂಗಡಿ ಗ್ರಾಪಂ ಗಡಿಪ್ರದೇಶವಾದ ಪಿಲಾರು, ಪುನಾರು ಭಾಗದಲ್ಲಿ ಸುಮಾರು 1.27 ಎಕರೆ ವಿಸ್ತೀರ್ಣ ಹೊಂದಿರುವ ಮೈಂದ್ ಕೆರೆ ಸರಿಯಾದ ನಿರ್ವಹಣೆ ಕೊರೆತೆಯಿಂದ ಕೆರೆ ಇತಿಹಾಸದ ಪುಟ ಸೇರುವಂತಿತ್ತು.
ಪಿಲಾರು ಗ್ರಾಮದ ಸರ್ಕಾರಿ ಜಾಗದಲ್ಲಿರುವ ಮೈಂದ್ ಕೆರೆ ಎರಡು ಗ್ರಾಮದ ಜನರಿಗೆ ಅಂತರ್ಜಲ ವೃದ್ಧಿಗೆ ಪ್ರಮುಖ ಕಾರಣವಾಗಿತ್ತು. ಬಳಿಕ ನಿರ್ವಹಣೆ ಕೊರತೆಯಿಂದ ಕಾಲ ಕಳೆಯುತ್ತಿದ್ದಂತೆ ಹೂಳುತುಂಬಿ ಹಲವು ವರ್ಷಗಳಿಂದ ಪಾಲುಬಿದ್ದ ಸ್ಥಿತಿಯಲ್ಲಿತ್ತು. ಅಲ್ಲದೆ ಮಳೆಗಾಲದಲ್ಲೂ ನೀರು ಸಂಗ್ರಹವಾಗದೆ ಕೆರೆ ಮರೆಯಾಗುವ ಎಲ್ಲ ಲಕ್ಷಣ ಕಾಣುತ್ತಿದ್ದಂತೆ ಸ್ಥಳೀಯ ಬೆಳ್ಮಣ್ ಲಯನ್ಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ್ ಪಾಟ್ಕರ್ ಮುತುವರ್ಜಿಯಲ್ಲಿ ಈ ಕೆರೆ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ, ಕೆರೆ ಹೂಳೆತ್ತುವ ಕಾರ್ಯಕ್ಕೆ ಕೈ ಹಾಕಿದ್ದು, ಜೆಸಿಬಿ ಯಂತ್ರ, ಟಿಪ್ಪರ್ ಬಳಕೆ ಮಾಡಿಕೊಂಡು ಕೆರೆ ಮಣ್ಣು ತೆಗೆದು ನಿರ್ವಹಣೆ ಮಾಡಿದ ಪರಿಣಾಮ ಕೆರೆ ತುಂಬಿ ತುಳುಕುತ್ತಿದೆ.
ಒಂದೆಡೆ ಬೆಳ್ಮಣ್ ಹಾಗೂ ಮತ್ತೊಂದೆಡೆ ಮುದರಂಗಡಿ ಎರಡೂ ಗ್ರಾಪಂ ವ್ಯಾಪ್ತಿಯ ಜನರಿಗೂ ಉಪಯೋಗವಾಗುವ ಈ ಕೆರೆ ಅಭಿವೃದ್ಧಿ ಕಾರ್ಯ ಎಂದು? ಎನ್ನುವ ಪ್ರಶ್ನೆ ಗ್ರಾಮದ ಜನ ಪ್ರಶ್ನಿಸುತ್ತಿದ್ದರೂ ಸಂಬಂಧಪಟ್ಟ ಎರಡೂ ಗ್ರಾಪಂ ಗಮನ ನೀಡುತ್ತಿರಲಿಲ್ಲ. ಈ ಹಿಂದೆ ಪಿಲಾರು ಗ್ರಾಮದ ಜನರಿಗೆ ಹಾಗೂ ಬೆಳ್ಮಣ್ ಗ್ರಾಮದ ಪುನಾರು, ಜಂತ್ರ ಪರಿಸರದ ಜನರಿಗೆ ನೀರಿನ ಪ್ರಮುಖ ಮೂಲವಾಗಿದ್ದ ಮೈಂದು ಕೆರೆ ಪಾಳುಬಿದ್ದಿರುವ ಬಗ್ಗೆ ‘ವಿಜಯವಾಣಿ’ ಸಮಗ್ರ ವರದಿ ಪ್ರಕಟಿಸಿದ ಬೆನ್ನಲ್ಲೆ ಸಾಮಾಜಿಕ ಕಳಕಳಿ ಸಂಸ್ಥೆ ಬೆಳ್ಮಣ್ ಲಯನ್ಸ್ ಕ್ಲಬ್ ತಂಡ ಕೆರೆ ನಿರ್ವಹಣೆಯಲ್ಲಿ ತೊಡಗಿಸಿಕೊಂಡ ಹಿನ್ನೆಲೆಯಲ್ಲಿ ಕೆರೆಯಲ್ಲಿ ನೀರು ಸಂಗ್ರಹವಾಗುವಂತಾಗಿದೆ.
ಹಲವು ವರ್ಷಗಳಿಂದ ಈ ಕೆರೆಯಲ್ಲಿ ನೀರು ಸಂಗ್ರಹಗೊಳ್ಳದ ಹಿನ್ನೆಲೆಯಲ್ಲಿ ಬೇಸಿಗೆಯಲ್ಲಿ ಈ ಭಾಗದ ನೂರಾರು ಕೃಷಿಕರು ಕೃಷಿ ಚಟುವಟಿಕೆಯನ್ನೇ ಮೊಟಕುಗೊಳಿಸಿ ಕುಳಿತುಕೊಳ್ಳುವಂತಾಗಿತ್ತು, ಇದೀಗ ಲಯನ್ಸ್ ಕ್ಲಬ್ ಮುತುವರ್ಜಿಯಲ್ಲಿ ಕೆರೆ ತಕ್ಕ ಮಟ್ಟಿಗೆ ಹೂಳು ತೆಗೆದು ನಿರ್ವಹಣೆ ಮಾಡಿದ ಪರಿಣಾಮ ಈ ಭಾಗದ ಕೃಷಿಕರಲ್ಲಿ ಮಂದಹಾಸ ಮೂಡಿದೆ. ಈ ಭಾರಿ ಹಲವು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆ ನೀರು ಹಾಗೂ ಗುಡ್ಡ ಪ್ರದೇಶದಿಂದ ಹರಿದು ಬರುವ ನೀರು ಕೆರೆಯಲ್ಲಿ ವಿಶಾಲವಾಗಿ ಸಂಗ್ರಹವಾಗಿದೆ.
ಪಿಲಾರು ಗ್ರಾಮ ಹಾಗೂ ಜಂತ್ರ ಪುನಾರು ಗ್ರಾಮದ ಜನರಿಗೆ ಉಪಯೋಗಕ್ಕೆ ಬರುವ ಈ ಕೆರೆಯೂ ಪಹಣಿ ಪ್ರಕಾರ ಪಿಲಾರು ಗ್ರಾಮದ ಸರ್ವೇ ನ.378/1ರಲ್ಲಿ ಸುಮಾರು 1.27 ಎಕರೆ ವಿಸ್ತೀರ್ಣ ಹೊಂದಿದೆ. ಉಳಿದ ಸ್ವಲ್ಪ ಭಾಗ ಬೆಳ್ಮಣ್ ಭಾಗದಲ್ಲಿಯೂ ಹರಡಿಕೊಂಡಿದ್ದು, ಹೀಗಾಗಿ ಎರಡೂ ಗ್ರಾಪಂಗಳ ನಿರ್ಲಕ್ಷ್ಯದಿಂದ ಈ ಕೆರೆಯೂ ಮರೆಯಾಗುವ ಪರಿಸ್ಥಿತಿ ಬಂದಿದ್ದು, ಇದೀಗ ಮರುಜೀವ ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿಯೂ ಈ ಕೆರೆ ಉಳಿವಿನ ಬಗ್ಗೆ ಸ್ಥಳೀಯ ಎರಡೂ ಗ್ರಾಪಂ ಎಚ್ಚೆತ್ತು ಕೆರೆ ಅಭಿವೃದ್ಧಿ ಮಾಡುವಲ್ಲಿ ಮನಸ್ಸು ಮಾಡಿದಲ್ಲಿ ಈ ಭಾಗದ ನೂರಾರು ಕೃಷಿಕರಿಗೆ ವರದಾನದ ಜತೆಯಲ್ಲಿ ಸ್ಥಳೀಯ ಬಾವಿಯಲ್ಲಿಯೂ ನೀರಿನ ಒರತೆ ಹೆಚ್ಚಾಗಲಿದೆ.
ಕೆರೆಯೂ ನಿರ್ವಹಣೆಯಿಲ್ಲದೆ ಪಾಳುಬಿದ್ದು ಆಟದ ಮೈದಾನದಂತಾಗಿತ್ತು. ಬಳಿಕ ನಮ್ಮ ಲಯನ್ಸ್ ಕ್ಲಬ್ ವತಿಯಿಂದ ಕೆರೆಯ ಹೂಳು ತೆಗೆಯುವ ಕಾರ್ಯ ಮಾಡಿದ ಪರಿಣಾಮ ಕೆರೆಯಲ್ಲಿ ನೀರು ಸಂಗ್ರಹವಾಗಿದೆ. ಇದರಿಂದ ನೂರಾರು ಎಕರೆ ಕೃಷಿಗೆ ಉಪಯೋಗವಾಗಲಿದೆ.-ವಿಶ್ವನಾಥ್ ಪಾಟ್ಕರ್ ಬೆಳ್ಮಣ್ ಲಯನ್ಸ್ ಕ್ಲಬ್ ಅಧ್ಯಕ್ಷ