ಬ್ರ್ಯಾಂಡ್ ಬೆಂಗಳೂರಿನಲ್ಲಿ ಬ್ರ್ಯಾಂಡೆಡ್ ಭ್ರಷ್ಟಾಚಾರ: ಮುಖ್ಯಮಂತ್ರಿ ಚಂದ್ರು

AAP Karnataka
Published on

ಬೆಂಗಳೂರು: ನಗರದ ಆರೋಗ್ಯ, ಸ್ವಚ್ಛತೆಯನ್ನು ಕಾಪಾಡುತ್ತಿರುವ ಪೌರಕಾರ್ಮಿಕರ ವೇತನದಲ್ಲಿನ 500 ಕೋಟಿ ರೂ. ಗಳಿಗೂ ಹೆಚ್ಚಿನ ಮೊತ್ತದ ಇ.ಎಸ್.ಐ ಮತ್ತು ಪಿಎಫ್ ಹಣವನ್ನು ಕಳೆದ 5 ವರ್ಷಗಳಿಂದ ಭರಿಸದೆ ಬಾಕಿ ಉಳಿಸಿಕೊಂಡಿದ್ದು ಬಿಬಿಎಂಪಿ ಹಾಗೂ ಕಸ ವಿಲೇವಾರಿ ಗುತ್ತಿಗೆದಾರರುಗಳು ಇವರುಗಳ ಭವಿಷ್ಯ ಹಾಗೂ ಆರೋಗ್ಯದೊಂದಿಗೆ ಚೆಲ್ಲಾಟವಾಡಿ ಬದುಕಿಗೆ ಸಂಚಕಾರವನ್ನು ತರುತ್ತಿದ್ದಾರೆ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಿಡಿಕಾರಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಚಂದ್ರು ಬ್ರ್ಯಾಂಡ್ ಬೆಂಗಳೂರನ್ನು ಮಾಡಲು ಹೊರಟಿರುವ ಉಪಮುಖ್ಯಮಂತ್ರಿಗಳು, ಮೊದಲು ಪೌರಕಾರ್ಮಿಕರ ಮೂಲ ಸಮಸ್ಯೆಗಳನ್ನು ಬಗೆಹರಿಸಲಿ. ಆದ್ದರಿಂದ ಬ್ರ್ಯಾಂಡ್ ಬೆಂಗಳೂರಿನಲ್ಲಿ ಬ್ರ್ಯಾಂಡೆಡ್ ಭ್ರಷ್ಟಾಚಾರ ಎನ್ನುಬಹುದಾಗಿದೆ ಎಂದು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.

ಬಿಬಿಎಂಪಿಯಲ್ಲಿ ಕಸ ನಿರ್ವಹಣೆಗೆ ಮಾತ್ರ ಇರುವ ಪೌರಕಾರ್ಮಿಕರು 32,000 ವಾಗಿದ್ದು ಇದೊಂದು ಆಶ್ಚರ್ಯಕರ ಸಂಗತಿಯಾಗಿದೆ. 700 ಪೌರಕಾರ್ಮಿಕರು ಮಾತ್ರ ಖಾಯಂ ಹುದ್ದೆ ಪಡೆದಿದ್ದು. 16,000 ಪೌರ ಕಾರ್ಮಿಕರಿಗೆ ಪಾಲಿಕೆ ನೇರ ವೇತನವನ್ನು ಮಾತ್ರ ನೀಡುತ್ತಿದೆ. ಸುಮಾರು 16,000 ಕಾರ್ಮಿಕರು ಗುತ್ತಿಗೆ ಏಜೆನ್ಸಿಗಳ ಅಡಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

AAP Karnataka

ಪೌರಕಾರ್ಮಿಕರಿಗೆ ಸದಾ ಮೂರು ತಿಂಗಳ ಸಂಬಳ ಬಾಕಿ ಉಳಿದಿರುತ್ತದೆ. ಬಿಬಿಎಂಪಿ ತನ್ನ ಕಾರ್ಮಿಕರ ಭವಿಷ್ಯದ ಹಾಗೂ ಆರೋಗ್ಯದಂತಹ ಅತಿ ಮುಖ್ಯ ವಿಚಾರದಲ್ಲಿ ಗುತ್ತಿಗೆದಾರರುಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಈ ರೀತಿಯ ನೂರಾರು ಕೋಟಿ ಅವ್ಯವಹಾರಗಳನ್ನು ಅನೇಕ ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ ಎಂದು ದಾಖಲೆಗಳ ಸಮೇತ ಮಾಹಿತಿ ನೀಡಿದ್ದಾರೆ.

ಲಭ್ಯ ಮಾಹಿತಿಯ ಪ್ರಕಾರ ಆರ್ ಆರ್ ನಗರ ವಲಯದಲ್ಲಿ 2018 ಮತ್ತು 19ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯ ಪ್ರಕಾರ 14 ವಾರ್ಡ್‌ಗಳ ಪೈಕಿ ಕೇವಲ 9 ವಾರ್ಡ್ ಗಳಲ್ಲಿ ಆಯ್ದ ಕೆಲವೇ ತಿಂಗಳುಗಳ ಇಎಸ್ಐ ಮತ್ತು ಪಿಎಫ್ ಅನ್ನು ಪಾವತಿಸಲಾಗಿದೆ. ಸುಮಾರು 7 ಕೋಟಿ 14 ಲಕ್ಷ 31,668 ರೂ ಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ವಲಯ ಒಂದರಲ್ಲೇ 18,636 ಪೌರಕಾರ್ಮಿಕರು ಇದ್ದಾರೆಂದು ಲೆಕ್ಕ ನೀಡಿರುವುದು ತೀರ ಅವಾಸ್ತವ ಸಂಗತಿ. ಈ ಸಂಖ್ಯೆಯಲ್ಲಿಯೇ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಬೃಹತ್ ಹಗರಣದ ಹಿಂದೆ ಬಲಾಢ್ಯ ರಾಜಕಾರಣಿಗಳು ಮತ್ತು ಅಧಿಕಾರಿಗಳ ನೇರ ಕೈವಾಡವಿದೆ. ತನಿಖೆಯ ಮೂಲಕವೇ ಇದು ಹೊರಬೀಳಲು ಸಾಧ್ಯ ಎಂದು ಮುಖ್ಯಂತ್ರಿ ಚಂದ್ರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net