

ನವದೆಹಲಿ: ವಿದೇಶಿ ದೇಣಿಗೆ ಸ್ವೀಕಾರ ಹಾಗೂ ಬಳಕೆ ವಿಚಾರದಲ್ಲಿ ಪಾರದರ್ಶಕತೆ ಖಾತರಿಪಡಿಸಲು ವಿದೇಶಿ ದೇಣಿಗೆ ನಿಯಂತ್ರಣ ಕಾನೂನಿಗೆ (ಎಫ್ಸಿಆರ್ಎ) ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ.
ವಿದೇಶಿ ಕೊಡುಗೆ ಪಡೆಯಲು ಅರ್ಹವಾದ ಸ್ವಯಂ ಸೇವಾ ಸಂಸ್ಥೆ (ಎನ್ಜಿಒ) ಅಥವಾ ಇನ್ನಾವುದೇ ಸಂಘಸಂಸ್ಥೆಗಳ ಪದಾಧಿಕಾರಿಗಳು, ನಿರ್ದೇಶಕರು ಮತ್ತಿತರ ಪ್ರಮುಖ ಕಾರ್ಯಕರ್ತರು ಗುರುತಿಗಾಗಿ ಆಧಾರ್ ಸಂಖ್ಯೆ ಸಲ್ಲಿಸುವುದನ್ನು ಕಡ್ಡಾಯಗೊಳಿಸುವಂತೆ ಕರಡು ತಿದ್ದುಪಡಿಯಲ್ಲಿ ಗೃಹ ಸಚಿವಾಲಯ ತಿಳಿಸಿದೆ.
ಪ್ರತಿವರ್ಷ ಸ್ವೀಕಾರವಾಗುವ ಸಾವಿರಾರು ಕೋಟಿ ರೂಪಾಯಿ ವಿದೇಶಿ ದೇಣಿಗೆ ಹಾಗೂ ಅದರ ಬಳಕೆ ಪಾರದರ್ಶಕವಾಗಿರುವಂತೆ ಮಾಡುವುದು ಉದ್ದೇಶವಾಗಿದೆ ಎಂದು ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಕರಡು ಮಸೂದೆ ಹೇಳಿದೆ. ಜನರ ಕಲ್ಯಾಣಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಎನ್ಜಿಒ ಮತ್ತಿತರ ಸಂಸ್ಥೆಗಳಿಗೆ ಅನುಕೂಲವಾಗುವಂತೆ ನೋಡಿಕೊಳ್ಳುವುದು ಇದರ ಗುರಿಯಾಗಿದೆ. ಸರ್ಕಾರಿ ನೌಕರರು ಮತ್ತು ಸರ್ಕಾರಿ ಮಾಲೀಕತ್ವ ಅಥವಾ ನಿಯಂತ್ರಿತ ನಿಗಮಗಳು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವುದನ್ನು ನಿಷೇಧಿಸಲಾಗುತ್ತದೆ.
ಎಫ್ಸಿಆರ್ಎ ವಿದೇಶಿ ದೇಣಿಗೆಯನ್ನು ನಿಯಂತ್ರಿಸು ತ್ತದೆ. ಇಂಥ ಕೊಡುಗೆಗಳು ದೇಶದ ಆಂತರಿಕ ಭದ್ರತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ಖಾತರಿಪಡಿಸುತ್ತದೆ. 1970ರಲ್ಲಿ ರೂಪುಗೊಂಡ ಈ ಕಾನೂನನ್ನು 2010ರಲ್ಲಿ ತಿದ್ದುಪಡಿ ಮಾಡಲಾಗಿತ್ತು.