

ನವದೆಹಲಿ: ವೈದ್ಯಕೀಯ ವಿದ್ಯಾರ್ಥಿಗಳು ಇನ್ನು ಮುಂದೆ ಜಿಲ್ಲಾಸ್ಪತ್ರೆಗಳಲ್ಲಿ ಮೂರು ತಿಂಗಳ ಸೇವೆ ಮಾಡುವುದು ಕಡ್ಡಾಯ. ಇಂಥದ್ದೊಂದು ನಿಯಮವನ್ನು ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) ರೂಪಿಸಿದೆ.
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ)ದ ಬೋರ್ಡ್ ಆಫ್ ಗವರ್ನರ್ಸ್ ಈ ನಿರ್ಧಾರ ತಳೆದಿದೆ. ಯಾವುದೇ ವೈದ್ಯಕೀಯ ಕಾಲೇಜು ಅಥವಾ ಸಂಸ್ಥೆಗಳಲ್ಲಿ ಎಂಡಿ ಅಥವಾ ಎಂಎಸ್ ವ್ಯಾಸಂಗ ಮಾಡುತ್ತಿರುವ ಎಲ್ಲ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಈ ನಿಯಮ ಕಡ್ಡಾಯವಾಗಿ ಅನ್ವಯಿಸಲಿದೆ.
3, 4 ಅಥವಾ 5ನೇ ಸೆಮಿಸ್ಟರ್ನಲ್ಲಿ ರೊಟೇಷನ್ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳನ್ನು ಈ ರೀತಿ ಜಿಲ್ಲಾಸ್ಪತ್ರೆಗಳಿಗೆ ನಿಯೋಜಿಸಲಿದ್ದು, ಇದನ್ನು ಡಿಸ್ಟ್ರಿಕ್ಟ್ ರೆಸಿಡೆನ್ಸಿ ಪ್ರೋಗ್ರಾಮ್ ಎಂದು ಕರೆಯಲಾಗಿದೆ. ವ್ಯಾಸಂಗದ ಹಂತದಲ್ಲೇ ವಿದ್ಯಾರ್ಥಿಗಳಿಗೆ ಆಸ್ಪತ್ರೆಗಳು ನಡೆಯುವ ರೀತಿ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಜಿಲ್ಲಾಮಟ್ಟದಲ್ಲಿ ಹೇಗೆ ಅನುಷ್ಠಾನಗೊಳ್ಳುತ್ತಿವೆ ಎಂಬುದನ್ನು ತಿಳಿಯಲು ಅನುಕೂಲವಾಗುವಂತೆ ಮಾಡುವುದು ಇದರ ಉದ್ದೇಶ. ಮತ್ತೊಂದೆಡೆ ಇದಕ್ಕಾಗಿ ಜಿಲ್ಲಾಸ್ಪತ್ರೆಗಳು ಕನಿಷ್ಠ ನೂರು ಹಾಸಿಗೆಗಳನ್ನು ಹೊಂದಿರಬೇಕು. (ಏಜೆನ್ಸೀಸ್)