ಅತ್ತೆಯ ತಲೆ ಒಡೆದು, ಕಣ್ಣು ಕಿತ್ತ ಸೊಸೆ! ಭೀಕರ ಕೊಲೆಯ ಹಿಂದಿದೆ ನೋವಿನ ಕಥೆ

murder
Published on

ಪಟನಾ: ಅತ್ತೆ ಸೊಸೆಯೆಂದರೆ ಅಮ್ಮ ಮಗಳಂತಿರಬೇಕು ಎನ್ನುತ್ತಾರೆ. ಆದರೆ ಆ ರೀತಿ ಅನ್ಯೋನ್ಯವಾಗಿರುವ ಕುಟುಂಬ ಸಿಗುವುದು ಅತಿ ಅಪರೂಪ. ಈ ಕುಟುಂಬದಲ್ಲಿ ಅತ್ತೆ ಸೊಸೆ ಜಗಳ ಅದೆಷ್ಟರ ಮಟ್ಟಿಗೆ ಏರಿತ್ತೆಂದರೆ, ಸಿಟ್ಟಿಗೆದ್ದ ಸೊಸೆ ಅತ್ತೆಯ ತಲೆಯನ್ನೇ ಒಡೆದು ಕಣ್ಣನ್ನು ಹೊರಗೆಳೆದು ಕೊಲೆ ಮಾಡಿಬಿಟ್ಟಿದ್ದಾಳೆ.

ಬಿಹಾರದ ಪಟನಾದಲ್ಲಿ ಇಂತದ್ದೊಂದು ಭೀಕರ ಘಟನೆ ನಡೆದಿದೆ. 55 ವರ್ಷದ ಮಹಿಳೆಯ ಕೊಲೆಯಾಗಿದೆ. ಆಕೆಯ ಸೊಸೆ ಲಲಿತಾ ದೇವಿ ಮದುವೆಯಾಗಿ ಹಲವು ವರ್ಷಗಳಾದರೂ ಗರ್ಭವತಿ ಆಗಿರಲಿಲ್ಲವಂತೆ. ಇದೇ ವಿಚಾರವಾಗಿ ಅತ್ತೆ ಸದಾ ಒಂದಿಲ್ಲೊಂದು ಟಾಂಟ್​ನ್ನು ಸೊಸೆಗೆ ಹೇಳುತ್ತಲೇ ಬಂದಿದ್ದಾಳೆ. ಈ ವಿಚಾರವಾಗಿ ಕಳೆದ ಕೆಲವು ತಿಂಗಳಿನಿಂದ ದೊಡ್ಡ ಪ್ರಮಾಣದ ಜಗಳವೇ ಆಗುತ್ತಿತ್ತಂತೆ.

ಇತ್ತೀಚೆಗೆ ಜಗಳ ತಾರಕಕ್ಕೇರಿದ್ದು, ಅತ್ತೆ ಸೊಸೆಯಿಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಸೊಸೆ ಅತ್ತೆಯ ತಲೆಗೆ ಬಲವಾದ ವಸ್ತುವಿನಿಂದ ಹೊಡೆದಿದ್ದಾಳೆ. ರಕ್ತ ಚೆಲ್ಲುತ್ತ ಬಿದ್ದ ಅತ್ತೆಯ ಕಣ್ಣಿನೊಳಗೆ ಕೈ ಹಾಕಿ ಕಣ್ಣನ್ನು ಹೊರ ತೆಗೆದಿದ್ದಾಳೆ. ಅತ್ತೆ ಜೀವ ಬಿಟ್ಟಿರುವುದು ದೃಢವಾದ ನಂತರ ತನಗೆ ತಾನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಅಷ್ಟರಲ್ಲಿ ಅಕ್ಕ ಪಕ್ಕದ ಮನೆಯವರು ಬಂದಿದ್ದು ಲಲಿತಾ ದೇವಿಯನ್ನು ರಕ್ಷಿಸಿದ್ದಾರೆ.

ಲಲಿತಾ ದೇವಿಯ ಶೇ. 40 ದೇಹಭಾಗ ಸುಟ್ಟಿದೆ. ಆಕೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net