

ರಾಯ್ಪುರ: ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರಿರುತ್ತಾರೆ. ಆದರೆ ಕೆಲವು ಸ್ನೇಹಿತರು ಪ್ರಾಣ ತೆಗೆಯಲೆಂದೇ ಸ್ನೇಹ ಮಾಡುತ್ತಾರೆ. ಪರ ಪುರುಷರಿಗೆ ಸ್ನೇಹಿತೆಯನ್ನು ಮಾರಾಟ ಮಾಡಲೆಂದೇ ಸ್ನೇಹ ಬೆಳೆಸಿ, ಉದ್ದೇಶ ಸಾಧಿಸಿಕೊಂಡ ಘಟನೆ ಚತ್ತೀಸ್ಗಢದಲ್ಲಿ ನಡೆದಿದೆ.
ಸಜದಾ ಹೆಸರಿನ ಗೆಳತಿ ತನ್ನ ವಿವಾಹಿತ ಸ್ನೇಹಿತೆಯೊಬ್ಬಳನ್ನು ಟೀ ಪಾರ್ಟಿಗೆ ಕರೆದಿದ್ದಾಳೆ. ಆಕೆಯ ಆಹ್ವಾನಕ್ಕೆ ಬೆಲೆ ಕೊಟ್ಟ ಗೆಳತಿ 8 ವರ್ಷದ ಮಗನೊಂದಿಗೆ ಸಜದಾ ಮನೆಗೆ ಬಂದಿದ್ದಾಳೆ. ಅವಳು ಕೊಟ್ಟ ಟೀ ಕುಡಿದಿದ್ದಾಳೆ. ಆದರೆ ಟೀನಲ್ಲಿ ಡ್ರಗ್ಸ್ ಸೇರಿಸಿದ್ದ ಹಿನ್ನೆಲೆಯಲ್ಲಿ ಟೀ ಕುಡಿಯುತ್ತಿದ್ದಂತೆ ಆಕೆ ಮತ್ತು ಆಕೆಯ ಮಗ ಎಚ್ಚರ ತಪ್ಪಿ ಬಿದ್ದಿದ್ದಾರೆ.
ಎಚ್ಚರ ತಪ್ಪಿ ಬಿದ್ದಿದ್ದ ಮಹಿಳೆ ಕಣ್ಣು ತೆರೆದು ನೋಡಿದಾಗ ಆಕೆ ಮೂವರು ಮಹಿಳೆಯರೊಂದಿಗೆ ಕಾರಿನಲ್ಲಿದ್ದಳು. ನನ್ನನ್ನೇಕೆ ಕಾರಿನಲ್ಲಿ ಕರೆದೊಯ್ಯುತ್ತಿದ್ದೀರಿ, ನನ್ನನ್ನು ಬಿಡಿ ಎಂದು ಕೇಳಿದ್ದಕ್ಕೆ, ಮಗನ ತಲೆಗೆ ಪಿಸ್ತೂಲು ಇಟ್ಟು ಸುಮ್ಮನೆ ಕೂರುವಂತೆ ಬೆದರಿಸಿದ್ದಾರೆ. ರಾಯ್ಪುರ ವಿಮಾನ ನಿಲ್ದಾಣಕ್ಕೆ ಆಕೆಯನ್ನು ಕರೆದೊಯ್ದು ಅಲ್ಲಿಂದ ದೆಹಲಿಗೆ ವಿಮಾನದಲ್ಲಿ ಕರೆದೊಯ್ದಿದ್ದಾರೆ. ದೆಹಲಿಯಿಂದ ಆಕೆಯನ್ನು ಹರಿಯಾಣಕ್ಕೆ ಕರೆದುಕೊಂಡು ಹೋಗಲಾಗಿದೆ.
ಹರಿಯಾಣದಲ್ಲಿ ಸಜದಾ ಸ್ನೇಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಗನನ್ನು ಕೊಲೆ ಮಾಡುವ ಬೆದರಿಕೆ ನೀಡಿ ಅತ್ಯಾಚಾರ ಮಾಡಲಾಗಿದೆ. ಅದಾದ ನಂತರ ತಾಯಿ ಮತ್ತು ಮಗನನ್ನು ಸುರೇಶ್ ಹೆಸರಿನ ವ್ಯಕ್ತಿಗೆ 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸುರೇಶ್ ಕೊಂಡುಕೊಂಡ ನಂತರ ಆಕೆ ಅವನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆ ಕಾರಣ ಆತ ಅವಳನ್ನು ವಾಪಾಸು ತಂದು ಸಜದಾ ಗೆಳೆಯನ ಬಳಿ ಬಿಟ್ಟಿದ್ದಾನೆ. ನಂತರ ಆತ ತಾಯಿ ಮಗನನ್ನು ರಾಜೇಶ್ ಹೆಸರಿನ ವ್ಯಕ್ತಿಗೆ 1.4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ.
ರಾಜೇಶ್ಗೆ ಮಾರಾಟವಾದ ಮಹಿಳೆ ಆತನ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ನಡೆದ ಘಟನೆಯನ್ನೆಲ್ಲ ವಿವರಿಸಿದ ನಂತರ ಆಕೆಯ ಸಹಾಯಕ್ಕೆ ರಾಜೇಶ್ ಮುಂದಾಗಿದ್ದಾನೆ. ಮಹಿಳೆ ತನ್ನೂರಿಗೆ ಮರಳಲು ಆತ ಸಹಾಯ ಮಾಡಿದ್ದಾನೆ. ಊರಿಗೆ ಬಂದ ಮಹಿಳೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್)