

ಬೆಂಗಳೂರು: ವಿಶ್ವಕರ್ಮ ಸಮಾಜದ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಅವರಿಗೆ ಮಂತ್ರಿ ಪದವಿ ನೀಡುವಂತೆ ಒತ್ತಾಯಿಸಿ ಸಮುದಾಯದ ಮೂವರು ಸ್ವಾಮೀಜಿಗಳು ಹಾಗೂ ಮುಖಂಡರು ಕೆಲ ಹೊತ್ತು ರಸ್ತೆಬದಿಯಲ್ಲಿ ಕುಳಿತ ಪ್ರಸಂಗ ಶನಿವಾರ ನಡೆಯಿತು.
ಸಿಎಂ ಗೃಹ ಕಚೇರಿಗೆ ಶನಿವಾರ ಈ ನಿಯೋಗ ಧಾವಿಸಿತ್ತು. ಕಾರ್ಯನಿಮಿತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಚೇರಿಗೆ ಬಂದಿರಲಿಲ್ಲ. ಭೇಟಿಗೆ ಕಾಲಾವಕಾಶ ಪಡೆದಿದ್ದರ ಬಗ್ಗೆ ಕಾವಲಿದ್ದ ಪೊಲೀಸರು ಕೇಳಿದರು. ಅಲ್ಲದೆ, ಎಲ್ಲರನ್ನೂ ಒಳಗೆ ಬಿಡಲಾಗದು ಎಂದು ಹೇಳಿದರು. ಇದರಿಂದ ಕುಪಿತರಾದ ಮುಖಂಡರು ಗೃಹ ಕಚೇರಿಯಿಂದ ಅನತಿ ದೂರದಲ್ಲಿ ಬಿಡಾರ ಹೂಡಿದರೆ, ಇವರೊಂದಿಗೆ ಏಕದಂಡಿ ಮಠದ ಶ್ರೀ ಕುಮಾರ ಸ್ವಾಮೀಜಿ, ಕಲ್ಲಿಗಾನಹಳ್ಳಿ ಮುಕ್ತಿ ಮಂದಿರ ಮಠದ ಶ್ರೀ ಗಂಗಾಧರ ಸ್ವಾಮೀಜಿ, ಕೊಪ್ಪಳದ ಶ್ರೀ ಗಣೇಶ್ವರ ಸ್ವಾಮೀಜಿ ಸಾಥ್ ನೀಡಿದರು. ಸ್ವಾಮೀಜಿಗಳಿಗೆ ಕುಳಿತುಕೊಳ್ಳಲು ಮೂರು ಕುರ್ಚಿಗಳ ವ್ಯವಸ್ಥೆ ಮಾಡಲಾಯಿತು.
ಡಿಸಿಪಿ ಮನವೊಲಿಕೆ: ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬೆಂಗಳೂರು ಕೇಂದ್ರ ಡಿಸಿಪಿ ಅನುಚೇತ್ ಅವರು ಸ್ವಾಮೀಜಿಗಳ ಮನವೊಲಿಸಿದರು. ರಸ್ತೆಬದಿ ಕುಳಿತುಕೊಳ್ಳುವುದು ಬೇಡ. ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಸ್ವಾಮೀಜಿಗಳನ್ನು ಹೀಗೆ ರಸ್ತೆಯಲ್ಲಿ ಕೂಡಿಸುವುದು ಸರಿಯಲ್ಲ. ಸ್ವಾಮೀಜಿಗಳು ಸೇರಿದಂತೆ ಆಯ್ದ ಕೆಲವು ಮುಖಂಡರಿಗೆ ಸಿಎಂ ಬಂದ ಬಳಿಕ ಭೇಟಿಗೆ ಕಾಲಾವಕಾಶ ಕೊಡಿಸುವೆ ಎಂದು ಮನವೊಲಿಸಿದರು. ಧರಣಿ ಕೈಬಿಟ್ಟ ಮುಖಂಡರು ಸ್ವಾಮೀಜಿಗಳ ಜತೆಗೂಡಿ ಗೃಹ ಕಚೇರಿ ಕೃಷ್ಣಾದ ಮುಖ್ಯಗೇಟಿನ ಮುಂದೆ ಜಮಾಯಿಸಿದರು. ಮತ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಸಿಎಂ ಬಂದ ಬಳಿಕ ಎಲ್ಲರನ್ನೂ ಕಚೇರಿ ಆವರಣದೊಳಗೆ ಪ್ರವೇಶಿಸಲು ಅವಕಾಶ ನೀಡಲಾಯಿತು.