

ತಿಪಟೂರು: ಶನಿವಾರ ಶಾಲೆ ಮುಗಿಸಿಕೊಂಡು ಪಕ್ಕದಲ್ಲೇ ಇದ್ದ ತಾತನ ಮನೆಗೆ ಹೋಗಿದ್ದ ಮಕ್ಕಳಿಬ್ಬರು ಭಾನುವಾರ ಬೆಳಗ್ಗೆ ಕೃಷಿಹೊಂಡದಲ್ಲಿ ದುರಂತ ಅಂತ್ಯಕಂಡಿದ್ದಾರೆ.
ಇಂತಹ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಬೊಮ್ಮಲಾಪುರದಲ್ಲಿ ಸಂಭವಿಸಿದೆ. ಹೊನ್ನವಳ್ಳಿ ಹೋಬಳಿ ಬೊಮ್ಮಲಾಪುರದ ರಮೇಶ್ ಎಂಬುವರ ಮಕ್ಕಳಾದ ರಾಮಚಂದ್ರ (14) ಮತ್ತು ಯಶವಂತ್ (12) ಮೃತರು. ತಾತನ ಮನೆಗೆ ಹೋಗಿದ್ದ ಮಕ್ಕಳು ಭಾನುವಾರ ಬೆಳಗ್ಗೆ ಬಹಿರ್ದೆಸೆಗೆಂದು ತೆರಳಿದ್ದರು. ಎಷ್ಟೊತ್ತಾದರೂ ವಾಪಸ್ ಮನೆಗೆ ಬಂದಿರಲೇ ಇಲ್ಲ, ಕುಟುಂಬಸ್ಥರು ಹೋಗಿ ನೋಡಿದಾಗ ಕೃಷಿಹೊಂಡರದಲ್ಲಿ ಇಬ್ಬರ ಶವ ಪತ್ತೆಯಾಗಿದೆ.
ಒಬ್ಬನ ಮೇಲೆ ಬಟ್ಟೆ ಇರುವುದು ಗಮನಿಸಿದರೆ, ಕೃಷಿ ಹೊಂಡಕ್ಕೆ ಬಿದ್ದು ಹೊರಬರಲಾರದ ಸ್ಥಿತಿಯಲ್ಲಿದ್ದ ಸಹೋದರನನ್ನು ಉಳಿಸಲು ಹೋಗಿ ಇನ್ನೊಬ್ಬನೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮಾಂತರ ವೃತ್ತ ನಿರೀಕ್ಷಕಿ ಜಯಲಕ್ಷ್ಮೀ ವೈದ್ಯರನ್ನು ಕರೆಸಿ ಮರಣೋತ್ತರ ಪರೀಕ್ಷೆ ನಡೆಸಿ ಶವಗಳನ್ನು ಹಸ್ತಾಂತರಿಸಿದ್ದಾರೆ. ಹೊನ್ನವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.