ಸಾವರ್ಕರ್ ಹೆಸರಲ್ಲಿ ತುಮಕೂರು ವಿವಿಯಲ್ಲಿ ಅಧ್ಯಯನ ಪೀಠ!

tumkur-vv
Published on

ತುಮಕೂರು: ಸಾವರ್ಕರ್​ ಫೋಟೋ-ಫ್ಲೆಕ್ಸ್​ ಅಳವಡಿಕೆ ವಿಚಾರ ರಾಜ್ಯದೆಲ್ಲೆಡೆ ವಿವಾದಕ್ಕೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ವಿನಾಯಕ ದಾಮೋದರ್​ ಸಾವರ್ಕರ್​ ಅಧ್ಯಯನ ಪೀಠ ಸ್ಥಾಪನೆಗೆ ತುಮಕೂರು ವಿವಿ ಸಿಂಡಿಕೇಟ್​ ಸಭೆಯಲ್ಲಿ ಶುಕ್ರವಾರ ಒಪ್ಪಿಗೆ ನೀಡಲಾಗಿದೆ.

ವಿವಿಯಲ್ಲಿ 14 ಅಧ್ಯಯನ ಪೀಠಗಳಿದ್ದು, ಸಿಎಂ ಬಸವರಾಜು ಬೊಮ್ಮಾಯಿ ಕೂಡ ಅಗ್ನಿ ಬನ್ನಿಗರಾಯ ಅಧ್ಯಯನ ಪೀಠ ಸ್ಥಾಪಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ. ಪ್ರಸ್ತುತ ಪೀಠಗಳ ಸಂಖ್ಯೆ 16ಕ್ಕೇರಿದೆ. ವಿವಿ ಸಿಂಡಿಕೇಟ್​ ಸದಸ್ಯ ಟಿ.ಡಿ.ವಿನಯ್​ ಶುಕ್ರವಾರ ನಡೆದ ಸಭೆಯ ಟೇಬಲ್​ ಅಜೆಂಡಾದಲ್ಲಿ ವಿಷಯ ಪ್ರಸ್ತಾಪಿಸಿದ್ದು, ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ.

ಪೀಠ ಸ್ಥಾಪನೆಗೆ ಕಾರಣರಾಗಿರುವ ಸಿಂಡಿಕೇಟ್​ ಸದಸ್ಯ ಟಿ.ಡಿ.ವಿನಯ್​ 1 ಲಕ್ಷ ರೂ. ಮೂಲ ಠೇವಣಿ ಕೂಡ ನೀಡಿದ್ದು, ಪೀಠ ಸ್ಥಾಪನೆಗೆ ಒಪ್ಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ವಿನಾಯಕ ದಾಮೋದರ್​ ಸಾವರ್ಕರ್​ ಪೀಠ ಸ್ಥಾಪನೆಗೆ ಅಗತ್ಯವಿರುವ ಕರಡು ಪರಿನಿಯಮಗಳನ್ನೂ ಸಿದ್ಧಪಡಿಸಲಾಗಿದೆ. ಪೀಠ ಕಾರ್ಯಾರಂಭಕ್ಕೆ ಅಗತ್ಯವಿರುವ 25 ಲಕ್ಷ ರೂಪಾಯಿಯನ್ನು ದಾನಿಗಳಿಂದ ಕೊಡುಗೆಯಾಗಿ ಪಡೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ವಿವಿಯಲ್ಲಿ ಸಾವರ್ಕರ್​ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ದೇಶದಲ್ಲಿ ಇದೇ ಮೊದಲನೆಯದು ಎನ್ನಲಾಗಿದೆ.

ವಿನಾಯಕ ದಾಮೋದರ್​ ಸಾವರ್ಕರ್​ ಭಾರತದ ಹೆಮ್ಮೆಯ ಪುತ್ರರಾಗಿದ್ದು, ರಾಜಕಾರಣಿ, ಕ್ರಾಂತಿಕಾರಿ ಹಾಗೂ ಬರಹಗಾರರಾಗಿದ್ದಾರೆ. ಅವರು ರಾಷ್ಟ್ರೀಯ ಸಿದ್ಧಾಂತ ಪ್ರತಿಪಾದಕರಾಗಿದ್ದು, ಜಿಲ್ಲೆಯ ಯುವಜನರಿಗೆ ಪ್ರೇರಣೆಯಾಗಲಿ ಎಂಬ ಉದ್ದೇಶದಿಂದ ಪೀಠ ಸ್ಥಾಪನೆಗೆ ಸಭೆಯಲ್ಲಿ ನಾನು ಪ್ರಸ್ತಾಪಿಸಿದ್ದ ಪ್ರಸ್ತಾಪಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ.

| ಟಿ.ಡಿ.ವಿನಯ್ ಸಿಂಡಿಕೇಟ್​ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net