ಬೆಳ್ತಂಗಡಿ: ಧರ್ಮದ ಮರ್ಮವನ್ನರಿತು ಮಾಡುವ ಆಚರಣೆಯಿಂದ ನಮ್ಮಲ್ಲಿರುವ ದೋಷ ನಿವಾರಣೆಯಾಗಿ ವರ್ತನೆಯಲ್ಲಿ ಪರಿವರ್ತನೆಯಾಗುತ್ತದೆ ಎಂದು ನಿವೃತ್ತ ಉಪನ್ಯಾಸಕಿ ಪ್ರೊ.ತ್ರಿಶಲಾ ಉದಯಕುಮಾರ್ ಮಲ್ಲ ಹೇಳಿದರು.
ಉಜಿರೆ ಸಿದ್ಧವನ ಗುರುಕುಲದಲ್ಲಿ ದಶಲಕ್ಷಣ ಪರ್ವ ಆಚರಣೆ ಉದ್ಘಾಟಿಸಿ ಮಾತನಾಡಿದರು. ದಶಲಕ್ಷಣ ಪರ್ವವು ಆಧ್ಯಾತ್ಮಿಕ ಪರ್ವವಾಗಿದ್ದು, ದಶಧರ್ಮಗಳ ಅನುಷ್ಠಾನದಿಂದ ಮಾನವೀಯ ಮೌಲ್ಯ ಉದ್ದೀಪನಗೊಂಡು, ಸುಖ-ಶಾಂತಿ, ನೆಮ್ಮದಿಯ ಸಾರ್ಥಕ ಜೀವನ ಸಾಧ್ಯವಾಗುತ್ತದೆ ಎಂದರು.
ಮುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ, ನಿರಂಜನ ಜೈನ್ ಅಳಿಯೂರು ಧಾರ್ಮಿಕ ಪ್ರವಚನ ನೀಡಿದರು.
ವಿದ್ಯಾರ್ಥಿಗಳಾದ ಆದರ್ಶ್ ಮತ್ತು ಜೀವನ್ ಮಾತನಾಡಿದರು. ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎ. ಕುಮಾರ ಹೆಗ್ಡೆ ಮಾತನಾಡಿ, ಚೌತಿ, ದಶಲಕ್ಷಣಪರ್ವ ಮೊದಲಾದ ಪರ್ವಗಳ ಆಚರಣೆಯಿಂದ ಸಾರ್ವಕಾಲಿಕ ಮಾನವೀಯ ಮೌಲ್ಯಗಳು ಉದ್ದೀಪನಗೊಂಡು ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಇಂದಿನ ವೇಗದ ಮತ್ತು ಯಾಂತ್ರಿಕ ಬದುಕಿನಲ್ಲಿ ನಮ್ಮ ಆಚಾರ ವಿಚಾರ ಮತ್ತು ಆಹಾರ-ವಿಹಾರ ಪರಿಶುದ್ಧವಾಗಿದ್ದಲ್ಲಿ ಶಾಂತಿ, ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ ಎಂದರು.
ಸಿದ್ಧವನ ಗುರುಕುಲದ ಉಪಪಾಲಕ ಕೇಶವ ಉಪಸ್ಥಿತರಿದ್ದರು. ಸಂಕೇತ್ ಸ್ವಾಗತಿಸಿದರು. ಚೇತನ್ ವಂದಿಸಿದರು. ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.
ಪಾಲನೆಯಿಂದ ಜೀವನ ಪಾವನ
ಮುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ, ನಿರಂಜನ ಜೈನ್ ಅಳಿಯೂರು ಧಾರ್ಮಿಕ ಪ್ರವಚನ ನೀಡಿ, ಉತ್ತಮ ಕ್ಷಮಾ ಉತ್ತಮ ಮಾರ್ದವ, ಉತ್ತಮ ಆರ್ಜವ, ಉತ್ತಮ ಶೌಚ, ಉತ್ತಮ ಸತ್ಯ, ಉತ್ತಮ ಸಂಯಮ, ಉತ್ತಮ ತಪ, ಉತ್ತಮ ತ್ಯಾಗ, ಉತ್ತಮ ಆಕಿಂಚನ್ಯ ಮತ್ತು ಉತ್ತಮ ಬ್ರಹ್ಮಚರ್ಯ ಎಂಬ ದಶಧರ್ಮಗಳು ನಮ್ಮ ಆತ್ಮನ ಸಹಜ ಗುಣಗಳಾಗಿವೆ. ಆತ್ಮನಿಗೆ ಕರ್ಮದ ಕೊಳೆ ಅಂಟಿದಾಗ ಆತ್ಮನ ಸಹಜಗುಣ ಪ್ರಕಟವಾಗುವುದಿಲ್ಲ. ರಾಗ-ದ್ವೇಷ ರಹಿತವಾಗಿ, ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್ ಚಾರಿತ್ರೃ ಎಂಬ ರತ್ನತ್ರಯ ಧರ್ಮದ ಮೂಲಕ ಧರ್ಮಗಳ ಪಾಲನೆ ಮಾಡಬೇಕು. ಕೋಪವನ್ನು ತ್ಯಜಿಸಿದಾಗ, ಕ್ಷಮಾ ಗುಣ ಬೆಳೆಯುತ್ತದೆ. ಮಾರ್ದವ ಅಂದರೆ ಮೃದು ಸ್ವಭಾವ, ವಿನಯಶೀಲತೆ, ಮನಸ್ಸು, ಕಣ್ಣು ಮತ್ತು ಕೋಪದ ನಿಯಂತ್ರಣದಿಂದ ದಶಧರ್ಮಗಳ ಪಾಲನೆಯೊಂದಿಗೆ ಜೀವನ ಪಾವನವಾಗುತ್ತದೆ ಎಂದರು.