

ಕೋಲಾರ: ಸ್ನೇಹಿತರು ಕರೆದಿದ್ದಾರೆ ಎಂದು ಮನೆಯಿಂದ ಹೊರಗೆ ಬಂದ ಬಾಲಕ ಹೆಣವಾದ ಘಟನೆ ಕೋಲಾರದ ಪಿ.ಸಿ.ಬಡಾವಣೆಯಲ್ಲಿ ನಡೆದಿದೆ.
ಕಾರ್ತಿಕ್ ಸಿಂಗ್ (17) ಮೃತ ಬಾಲಕ. ಪಿಸಿ ಬಡಾವಣೆಯ ನಿವಾಸಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಅರುಣ್ ಸಿಂಗ್ ಎಂಬುವರ ಮಗ ಕಾರ್ತಿಕ್ ಸಿಂಗ್. ಕೋಲಾರದ ಎಸ್.ಡಿ.ಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಾರ್ತಿಕ್. ಕೊಲೆಗಟುಕರ ಕೈಗೆ ಸಿಕ್ಕಿ ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾನೆ.
ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕ, ಹೊಟ್ಟೆ ನೋವು ಎಂದು ಶುಕ್ರವಾರ ಕಾಲೇಜಿಗೂ ಹೋಗದೆ ಮನೆಯಲ್ಲೇ ಇದ್ದನು. ಹೀಗಿರುವಾಗಲೇ ಸಂಜೆ ವೇಳೆಗೆ ಯಾರೋ ಸ್ನೇಹಿತರು ಪೋನ್ ಮಾಡಿ ಕರೆದರು ಎಂದು ಅಮ್ಮನಿಗೆ ಹೇಳಿ 5.30 ಸುಮಾರಿಗೆ ಮನೆಯಿಂದ ಹೊರ ಹೋಗಿದ್ದಾನೆ. 7 ಗಂಟೆ ಸುಮಾರಿಗೆ ಆತನ ಮೊಬೈಲ್ ಪೋನ್ ಸ್ವಿಚ್ ಆಫ್ ಆಗಿದೆ. ಆದರೆ ಎಲ್ಲೋ ಹೋಗಿರಬೇಕು ಬರ್ತಾನೆ ಎಂದುಕೊಂಡು ಮನೆಯವರು ಸುಮ್ಮನಿದ್ದರು. ಆದರೆ 9 ಗಂಟೆ ಸುಮಾರಿಗೆ ಯಾರೋ ನಿಮ್ಮ ಮಗನನ್ನು ಹೊಡೆದುಹಾಕಿ ಕೊಲೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಅಷ್ಟೊತ್ತಿಗೆ ಓಡೋಡಿ ಬಂದ ಕುಟುಂಬಸ್ಥರು ಬಂದು ನೋಡುವಷ್ಟರಲ್ಲಿ ಕಾರ್ತಿಕ್ನನ್ನು ಶಾಲೆಯ ಆವರಣದಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪಿ.ಸಿ. ಬಡವಾಣೆ ಹಾಗೂ ಹಾರೋಹಳ್ಳಿ ಏರಿಯಾದ ಕೆಲವು ಹುಡುಗರ ಗ್ಯಾಂಗ್ ನೊಂದಿಗೆ ಸ್ನೇಹ ಮಾಡಿದ್ದ ಕಾರ್ತಿಕ್. ಕಳೆದ ಕೆಲವು ದಿನಗಳ ಹಿಂದೆ ಅದೇ ಗ್ಯಾಂಗ್ ಹುಡುಗರಿಂದ ಏಟು ತಿಂದು ಗಲಾಟೆಯಾಗಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು, ಈಗಲೂ ಅದೇ ಹುಡುಗರಿಂದಲೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.ದಿಲೀಪ್ ಆಲಿಯಾಸ್ ಶೈನು ಎಂಬುವನೇ ಈ ಕೊಲೆ ಮಾಡಿರುವ ಬಗ್ಗೆ ಆತನ ತಾಯಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಏರಿಯಾದಲ್ಲಿ ಸಣ್ಣ ಸಣ್ಣ ಹುಡುಗರುಗಳು ಗಾಂಜಾ ಸೇರಿದಂತೆ ದುಶ್ಚಟಗಳಿಗೆ ಒಳಗಾಗಿದ್ದಾರೆ, ಕ್ಷುಲ್ಲಕ ಕಾರಣಕ್ಕಾಗಿ ಗ್ಯಾಂಗ್ ಕಟ್ಟಿಕೊಂಡು ಸಿನಿಮಾ ಸ್ಟೈಲ್ನಲ್ಲಿ ಗಲಾಟೆ ಮಾಡೋದು, ಬರ್ತಡೇ ಕೇಕ್ ಕಟ್ ಮಾಡೋದು, ಕೇಳಿದವರ ಮೇಲೆ ಹಲ್ಲೆ ಮಾಡೋದು ಹಲ್ಲೆ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡೋದು ಇಂಥ ಕೃತ್ಯಗಳನ್ನು ಮಾಡುತ್ತಾರೆ ಅನ್ನೋದು ಸ್ಥಳೀಯರ ಆರೋಪ. ಪೊಲೀಸರು ಇಂಥ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಅನ್ನೋದು ಸ್ಥಳೀಯ ನಿವಾಸಿಗಳ ಮನವಿ.