'ಪುನೀತ ನಮನ' ಕಾರ್ಯಕ್ರಮ: ಅಭಿಮಾನಿಗಳೇ ತಪ್ಪು ತಿಳ್ಕೋಬೇಡಿ ಎಂದ ಶಿವಣ್ಣ

puneethrajkumar shivarajkuamr
Published on

ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಇಂದು(ನ.16) ಮಧ್ಯಾಹ್ನ 3 ಗಂಟೆಗೆ ಅರಮನೆ ಮೈದಾನದಲ್ಲಿ ‘ಪುನೀತ್ ನಮನ’ ಕಾರ್ಯಕ್ರಮ ನಡೆಯಲಿದೆ. ಈ ಕುರಿತು ಮಾತನಾಡಿದ ನಟ ಶಿವರಾಜ್​ಕುಮಾರ್​ ಅವರು 'ಪುನೀತ ನಮನ' ಕಾರ್ಯಕ್ರಮ ಕುರಿತು ಅಭಿಮಾನಿಗಳೇ ತಪ್ಪು ತಿಳ್ಕೋಬೇಡಿ ಎಂದು ಮನವಿ ಮಾಡಿದ್ದಾರೆ.

ಅಪ್ಪು ನಮ್ಮನ್ನು ಅಗಲಿ 2 ವಾರ ಕಳೆದರೂ ಅವರ ಮೇಲಿನ ಪ್ರೀತಿ ಮತ್ತು ಅಭಿಮಾನ ಕಿಂಚಿತ್ತೂ ಕರಗಿಲ್ಲ. ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟು ಅಪ್ಪು ಸಮಾಧಿಗೆ ಕೈಮುಗಿಯುತ್ತಾ ಕಂಬನಿ ಮಿಡಿಯುತ್ತಲೇ ಇದ್ದಾರೆ. ಅಪ್ಪು ಹಾಕಿಕೊಟ್ಟ ಮಾರ್ಗದಲ್ಲೇ ನೇತ್ರದಾನಕ್ಕೆ ನೋಂದಣಿ ಮಾಡಿಸುತ್ತಿದ್ದಾರೆ. ಅಪ್ಪು ಹೆಸರಲ್ಲಿ ಅನ್ನದಾನ ಮಾಡುತ್ತಿದ್ದಾರೆ. ಅಪ್ಪುಗಾಗಿ ಕೋಟ್ಯಂತರ ಅಭಿಮಾನಿಗಳ ಮನ ಮಿಡಿಯುತ್ತಲೇ ಇದೆ. ಹೀಗಿರುವಾಗ ಇಂದು ನಡೆಯುತ್ತಿರುವ ಪುನೀತ ನಮನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ ಎಂಬ ಪ್ರಶ್ನೆಯೂ ಎದ್ದಿದೆ. ಇದರ ಬೆನ್ನಲ್ಲೇ 'ಪುನೀತ ನಮನ'ದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗದೆ ಬೇಸರಗೊಂಡಿರುವ ಅಭಿಮಾನಿಗಳಿಗೆಂದೇ ಪ್ರತ್ಯೇಕವಾಗಿ ಕಾರ್ಯಕ್ರಮ ಆಯೋಜಿಸುವುದಾಗಿ ನಿರ್ಮಾಪಕ ಸಾರಾ ಗೋವಿಂದು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಶಿವಣ್ಣ, ಅಭಿಮಾನಿಗಳನ್ನು ಬಿಟ್ಟು ಕಾರ್ಯಕ್ರಮ ಮಾಡಬೇಕು ಎಂಬ ಉದ್ದೇಶ ಇಲ್ಲ. ಯಾರೊಬ್ಬರೂ ಬೇಸರ ಮಾಡಿಕೊಳ್ಳಬೇಡಿ. ಅಭಿಮಾನಿಗಳಿಗೆಂದೇ ಇನ್ನೊಂದು ಕಾರ್ಯಕ್ರಮ ಮಾಡುವುದಾಗಿ ಸಾರಾ ಗೋವಿಂದು ಹೇಳಿದ್ದಾರೆ. ಅದಕ್ಕೆ ನಮ್ಮದೂ ಅನುಮತಿ ಇದೆ. ನಾವೆಲ್ಲರೂ ಬರ್ತೀವಿ, ಇಡೀ ಸಿನಿಮಾ ಇಂಡಸ್ಟ್ರಿಯೇ ಬರುತ್ತೆ... 'ಪುನೀತ ನಮನ' ಕಾರ್ಯಕ್ರಮ ಕುರಿತು ಅಭಿಮಾನಿಗಳೇ ತಪ್ಪು ತಿಳ್ಕೋಬೇಡಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net