

ಚನ್ನಪಟ್ಟಣ: ರಾಮನಗರ ಜಿಲ್ಲೆ ಚನ್ನಪಟ್ಟಣದ ಸೀಬನಹಳ್ಳಿ ಗುಡ್ಡೆಯ ಸಮೀಪ ತಲೆ, ಚರ್ಮವಿಲ್ಲದ ಸುಮಾರು 50ಕ್ಕೂ ಹೆಚ್ಚು ಪ್ರಾಣಿಗಳ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದೆ.
ಬುಧವಾರ ರಾತ್ರಿ ಸೀಬನಹಳ್ಳಿ ಗುಡ್ಡೆ ಪಕ್ಕದಲ್ಲಿ ಯಾರೋ ಪ್ರಾಣಿಗಳ ಮೃದೇಹ ಬಿಸಾಡಿ ಹೋಗಿದ್ದಾರೆ. ಗುರುವಾರ ಬೆಳ್ಳಬೆಳಗ್ಗೆ ತಲೆ-ಚರ್ಮವಿಲ್ಲದ ಪ್ರಾಣಿಗಳ ಮೃತದೇಹದ ರಾಶಿಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಯಾರೋ ಕಿಡಿಗೇಡಿಗಳು ಜಿಂಕೆಯನ್ನು ಭೇಟೆಯಾಡಿ ಚರ್ಮ ಸುಲಿದು, ತಲೆಕತ್ತರಿಸಿಕೊಂಡು ಬಿಸಾಡಿರಬಹುದು ಎಂದು ಶಂಕಿಸಿದ್ದಾರೆ. ಇನ್ನೂ ಕೆಲವರು ಸತ್ತ ಕುರಿಗಳನ್ನು ಕುರಿಗಳ ಮಾಲೀಕರು ಈ ರೀತಿ ಬಿಸಾಡಿದ್ದಾರೆ ಎಂದೂ ಅನುಮಾನ ಪಟ್ಟಿದ್ದಾರೆ. ಅಷ್ಟೇ ಅಲ್ಲ ವಾಮಾಚಾರಕ್ಕೆ ಪ್ರಾಣಿಗಳನ್ನ ಬಳಸಿಕೊಂಡಿರಬಹುದು ಎಂಬ ತರಹೇವಾರಿ ಚರ್ಚೆಯಾಗುತ್ತಿದೆ. ಎಂ.ಕೆ.ದೊಡ್ಡಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.