2 ಗಂಟೆ ಮೊದಲು ಹೊರಟಿದ್ದಕ್ಕೆ ಬಚಾವ್! ಕಜಖಸ್ತಾನ್ ಮಾರ್ಗವಾಗಿ ಭಾರತಕ್ಕೆ ಮರಳಿದ ಶಿವಮೊಗ್ಗದ ಜಯಶೀಲಾ

smg jayasheela
Published on

ಭದ್ರಾವತಿ: ಯೂಕ್ರೇನ್ ರಾಜಧಾನಿ ಕೀವ್ ಏರ್‌ಪೋರ್ಟ್‌ನಿಂದ ವಿಮಾನ ದೆಹಲಿಗೆ ಹೊರಡುವುದು ಸ್ವಲ್ಪ ತಡವಾಗಿದ್ದರೂ ಶಿವಮೊಗ್ಗದ ಎಂಬಿಬಿಎಸ್ ವಿದ್ಯಾರ್ಥಿನಿ ರಷ್ಯಾದ ಕ್ಷಿಪಣಿ ದಾಳಿಗೆ ತುತ್ತಾಗುವ ಸಾಧ್ಯತೆ ಇತ್ತು. ಆದರೆ ಕ್ಷಿಪಣಿ ದಾಳಿಗೂ 2 ಗಂಟೆ ಮುನ್ನವೇ ಏರ್ ಪೋರ್ಟ್ ಬಿಟ್ಟಿದ್ದರಿಂದ ಕ್ಷೇಮವಾಗಿ ಫೆ.27ರಂದು ತವರೂರು ಸೇರಲಿದ್ದಾರೆ.

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿರುವ ನಂಜಪ್ಪ ಬಡಾವಣೆಯ ಶಿಕ್ಷಕ ದಂಪತಿ ಬಿ.ಜೆ.ಕಲಾವತಿ ಹಾಗೂ ಕೆ.ಟಿ.ಹನುಮಂತಯ್ಯ ಪುತ್ರಿ ಕೆ.ಎಚ್.ಜಯಶೀಲಾ ಚರ್ನೋವಿಡ್ಸಿಯಲ್ಲಿರುವ ಬುಕೇನ್ವಿಯಾ ಮೆಡಿಕಲ್ ಕಾಲೇಜಿನಲ್ಲಿ (ಬಿಎಸ್‌ಎಂಯೂ) ದ್ವಿತೀಯ ವರ್ಷದ ಎಂಬಿಬಿಎಸ್ ಓದುತ್ತಿದ್ದರು.

ಫೆ.22ರಂದು ರಾತ್ರಿ 2 ಗಂಟೆಗೆ ಕೀವ್ ಏರ್‌ಪೋರ್ಟ್ ನಿಂದ ಹೊರಟು ಕಜಖಸ್ತಾನ್ ಮೂಲಕ ಗುರುವಾರ ದೆಹಲಿ ತಲುಪಿದ್ದಾರೆ. ನಂತರ ಬೆಂಗಳೂರಿಗೆ ಬಂದು ಶಿವಮೊಗ್ಗವನ್ನು ಕ್ಷೇಮವಾಗಿ ತಲುಪಲಿದ್ದಾರೆ. ಜಯಶೀಲಾ ಮಧ್ಯರಾತ್ರಿ 2 ಗಂಟೆಗೆ ಕೀವ್‌ನಿಂದ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದು, ಮುಂಜಾನೆ 4 ಗಂಟೆಗೆ ಏರ್‌ಪೋರ್ಟ್ ಮೇಲೆ ರಷ್ಯಾ ದಾಳಿ ನಡೆದಿದೆ. ರಷ್ಯಾ ಮೂಲಕ ದೆಹಲಿ ತಲುಪಬೇಕಾದ ವಿಮಾನ, ಮಾರ್ಗ ಬದಲಾಯಿಸಿ ಕಜಖಸ್ತಾನ್ ಮೂಲಕ ಬಂದಿದ್ದು ಮಗಳು ಭಾರತಕ್ಕೆ ಹೊರಟಿರುವ ಮಾಹಿತಿಯನ್ನು ಜಯಶೀಲಾ ಅವರ ಗೆಳತಿಯರಿಂದ ಕುಟುಂಬ ತಿಳಿದುಕೊಂಡಿದೆ.

ಯುದ್ಧದ ಮಾಹಿತಿ ಇದ್ದ ಅಲ್ಲಿನ ಕಾಲೇಜು ಆಡಳಿತ ಮಂಡಳಿ ಅಲ್ಲಿನ ವಿದ್ಯಾರ್ಥಿಗಳಿಗೆ ಫೆ.13ರಂದು ನಿಮ್ಮ ದೇಶಗಳಿಗೆ ತೆರಳಬಹುದು ಎಂದು ತಿಳಿಸಿದ್ದರು. ಆದರೆ ಸದ್ಯಕ್ಕೆ ಆನ್‌ಲೈನ್ ಕ್ಲಾಸ್ ನಡೆಯುತ್ತಿದ್ದು ಆಫ್‌ಲೈನ್ ಕ್ಲಾಸ್ ಆರಂಭವಾದರೆ ಶೀಘ್ರ ಬರಲು ಸಾಧ್ಯವಾಗುವುದಿಲ್ಲ ಎಂದು ಅಲ್ಲಿಯೇ ಉಳಿದುಕೊಂಡಿದ್ದರು. 3ನೇ ಸೆಮ್ ಜುಲೈ 10ಕ್ಕೆ ಮುಗಿಯಲಿದ್ದು, ಆಗ ಭಾರತಕ್ಕೆ ಹಿಂದಿರುಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಪರಿಸ್ಥಿತಿ ಈಗಲೇ ಬರುವಂತೆ ಮಾಡಿದೆ.

ವಿದ್ಯಾರ್ಥಿನಿ ಜಯಶೀಲ ಅವರ ತಾಯಿ ಕಲಾವತಿ ಭದ್ರಾವತಿ ಜೆಪಿಎಸ್‌ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ತಂದೆ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಶಿಕ್ಷಕರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net