

| ಕೌಸ್ತುಭ ಹೆಗಡೆ ಆನಂದಪುರ
ಮಲೆನಾಡಿನ ವಿವಿಧ ಭಾಗಗಳಲ್ಲಿ ಅಡಕೆ-ತೆಂಗು ಇತ್ಯಾದಿ ಬಹು ವಾರ್ಷಿಕ ಸುಸ್ಥಿರ ಕೃಷಿಯ ಜತೆ ಉಪ ಆದಾಯದ ಕೃಷಿ ನಡೆಸಿ ಯಶಸ್ವಿ ಆದವರು ಅಲ್ಲಲ್ಲಿ ಕಂಡು ಬರುತ್ತಾರೆ. ಅದೇ ರೀತಿ ಸಾಗರ ತಾಲೂಕಿನ ಸಂಪಿಗೆಸರದ ಬಳಿ ಹೆನಗೆರೆ ಗ್ರಾಮದ ಯುವ ರೈತ ಕಿರಣ್‌ಕುಮಾರ್ ಜೇನು ಕೃಷಿ ನಡೆಸಿ ಯಶಸ್ವಿಯಾಗಿದ್ದಾರೆ.
ಕಿರಣ್‌ಕುಮಾರ್ 12 ವರ್ಷಗಳಿಂದ ಜೇನು ಕೃಷಿ ನಡೆಸುತ್ತಿದ್ದಾರೆ. ಇವರ ತಂದೆ ಸಹ ಜೇನು ಸಾಕಣೆ ನಡೆಸುತ್ತಿದ್ದರು. ತಂದೆಯೊಂದಿಗೆ ತಾವೂ ಇದರಲ್ಲಿ ತೊಡಗಿಕೊಂಡು ಆಸಕ್ತಿ ಬೆಳೆಸಿಕೊಂಡಿದ್ದರು. ಅಡಕೆ ತೋಟ, ಭತ್ತದ ಗದ್ದೆ ಮತ್ತು ಬ್ಯಾಣ ಇತ್ಯಾದಿ ಜಮೀನು ಹೊಂದಿರುವ ಇವರು ಮನೆಯ ಸುತ್ತಮುತ್ತ ಸಾಕಷ್ಟು ಖಾಲಿ ಜಾಗ ಹೊಂದಿದ್ದಾರೆ. ಮನೆಯ ಹಿಂಭಾಗದಲ್ಲಿ ಸಹಜ ಕಾಡು ಸಹ ಇದ್ದು, ಜೇನು ಸಾಕಣೆಗೆ ಪರಿಸರ ಪೂರಕವಾಗಿದೆ.
ಇವರ ತಂದೆಯ ಕಾಲದಲ್ಲಿ ಕೇವಲ 8-10 ಜೇನು ಸಾಕಣೆ ಪೆಟ್ಟಿಗೆ ಇದ್ದವು. ಈಗ ಇವರ ಬಳಿ 25 ಜೇನು ಪೆಟ್ಟಿಗೆ ಇವೆ. ತಮ್ಮ ಸಂಬಂಧಿಕರು, ಪರಿಚಿತರ ಮನೆಯಲ್ಲಿ ಜೇನು ಪೆಟ್ಟಿಗೆ ಖಾಲಿ ಇರುವುದನ್ನು ಹುಡುಕಿ ತಂದು ಅಲ್ಪಸ್ವಲ್ಪ ದುರಸ್ತಿ ಮಾಡಿಕೊಂಡು ಜೇನು ಪೆಟ್ಟಿಗೆ ಸಂಗ್ರಹಿಸಿದ್ದಾರೆ.
ಇವರು ತಮ್ಮ ಜಮೀನಿನ ಸುತ್ತಮುತ್ತ ಇರುವ ಕಾಡು ಪ್ರದೇಶ, ಮರದ ಪೊಟರೆ, ಗೆದ್ದಲು ಹುತ್ತ, ಮಣ್ಣಿನ ರಂದ್ರ, ಬಿಲ, ಇಳಿಜಾರು ದರೆ, ಜಂಬಿಟ್ಟಿಗೆ ಕಲ್ಲಿನ ಸಂದು ಇತ್ಯಾದಿಗಳಲ್ಲಿ ಗೂಡು ಕಟ್ಟಿರುವ ತುಡುವೆ ಜೇನನನ್ನು ಹಿಡಿದು ತಂದು ಚಾಕಚಕ್ಯತೆಯಿಂದ ಮರದ ಪೆಟ್ಟಿಗೆಯಲ್ಲಿ ಇರಿಸಿ ಸಾಕಣೆ ನಡೆಸುತ್ತಾರೆ. ಮುಖ್ಯ ಕೃಷಿಯ ಜತೆಗೆ ಬೆಳಗ್ಗೆ ಮತ್ತು ಸಂಜೆ ಬಿಡುವು ಮಾಡಕೊಂಡು ಜೇನು ಪೆಟ್ಟಿಗೆಯಲ್ಲಿನ ಜೇನು ಹುಳುಗಳ ಬಗ್ಗೆ ಗಮನ ಹರಿಸುತ್ತಾರೆ.
ತಮ್ಮ ಮನೆಯ ಅಂಗಳ, ಹಿತ್ತಲು ಪ್ರದೇಶ, ಮನೆಯ ಹಿಂಭಾಗ ಮತ್ತು ಮುಖ್ಯರಸ್ತೆಯಿಂದ ಮನೆಗೆ ಬರುವ ಕಾಲು ದಾರಿ ಹೀಗೆ ವಿವಿಧ ಸ್ಥಳಗಳಲ್ಲಿ ಜೇನುಪೆಟ್ಟಿಗೆ ಇರಿಸಿದ್ದಾರೆ. ಫೆಬ್ರವರಿ ಮೊದಲ ವಾರದಿಂದ ಜೇನುತುಪ್ಪ ಸಂಗ್ರಹ ಆರಂಭವಾಗುತ್ತದೆ. ಜೇನಿನ ತಟ್ಟಿಯಿಂದ ತುಪ್ಪ ಬೇರ್ಪಡಿಸಲು ತಿರುಗಿಸುವ ಯಂತ್ರ ಬಳಸುತ್ತಾರೆ. ಇದರಿಂದ ಜೇನು ತುಪ್ಪ ಸುಲಭವಾಗಿ ಬೇರ್ಪಡಿಸಿ ಬಾಟಲಿಗಳಲ್ಲಿ ಸಂಗ್ರಹಿಸಲು ಅನುಕೂಲವಾಗುತ್ತದೆ.
ಕಳೆದ ವರ್ಷ 25 ಜೇನು ಪೆಟ್ಟಿಗೆ ನಿರ್ವಹಿಸಿ ಒಟ್ಟು ಸುಮಾರು 54 ಕಿ.ಗ್ರಾಂ. ಜೇನು ತುಪ್ಪ ಸಂಗ್ರಹಿಸಿ ಮಾರಿದ್ದರು. ಒಂದು ಕಿಲೋ ಗ್ರಾಂಗೆ 500 ರೂ.ನಂತೆ ಆದಾಯ ದೊರೆತಿತ್ತು. ಈ ವರ್ಷ ಮಳೆಗಾಲದಲ್ಲಿ ಕೆಲವು ಜೇನು ಹುಳುಗಳು ಪೆಟ್ಟಿಗೆಯಿಂದ ಹೊರ ಬಿದ್ದು ಹಾರಿ ಹೋಗಿದ್ದವು. ಇದರಿಂದ ಈ ವರ್ಷ ಜನವರಿಯಿಂದ ಇವರ ಬಳಿ ಕೇವಲ 12 ಜೇನು ಪೆಟ್ಟಿಗೆ ಇವೆ. ಈ ವರ್ಷ 28 ರಿಂದ 30 ಕಿ.ಗ್ರಾಂ. ಜೇನು ತುಪ್ಪ ಸಂಗ್ರಹಿಸುವ ಗುರಿ ಇದೆ.
ನನ್ನ ತಂದೆಯಿಂದ ಜೇನು ಸಾಕಣೆ ತಂತ್ರಗಳನ್ನು ಕಲಿತುಕೊಂಡಿದ್ದೆ. ಜೇನು ಹುಳು ಸಾಕಣೆಯಿಂದ ನಮ್ಮ ತೋಟದ ಅಡಕೆ, ತೆಂಗು, ಬಾಳೆ, ಮಳೆಗಾಲದ ತರಕಾರಿ ಬೆಳೆ ಇತ್ಯಾದಿಗಳ ಫಸಲು ಅಧಿಕವಾಗುತ್ತದೆ. ದಿನದ ಬಿಡುವಿನ ಸಮಯದಲ್ಲಿ ಇವುಗಳ ಉಸ್ತುವಾರಿ ನಡೆಸುತ್ತೇನೆ. ಈ ಕೃಷಿಯಿಂದ ಲಾಭದ ಜೊತೆಗೆ ಮನಸ್ಸಿಗೆ ಸದಾ ಲವಲವಿಕೆ ದೊರೆಯುತ್ತದೆ
| ಕಿರಣ್‌ಕುಮಾರ್ ಹೆನಗೆರೆ ಜೇನು ಕೃಷಿಕ
ಜೇನುಕೃಷಿ ಬಗ್ಗೆ ಕ್ರಮಬದ್ಧವಾದ ತರಬೇತಿ ಪಡೆದು ನಿರ್ವಹಣೆ ಮಾಡಬೇಕು. ಜೇನು ಸಾಕಣೆಯಲ್ಲಿ ಆಸಕ್ತರಿಗೆ ಜೇನು ಸಾಕುವವರ ಸಹಕಾರ ಸಂಘ ರಿಯಾಯಿತಿ ದರದಲ್ಲಿ ಜೇನುಪೆಟ್ಟಿಗೆ, ತುಪ್ಪ ತೆಗೆಯುವ ಯಂತ್ರ ಇತ್ಯಾದಿ ಒದಗಿಸುತ್ತದೆ. ಮುಖ್ಯ ಕೃಷಿಯ ಜತೆಗೆ ಉಪ ಕೃಷಿಯಾಗಿ ಇದನ್ನು ನಿರ್ವಹಿಸಿದರೆ ಅಧಿಕ ಲಾಭ ದೊರೆಯುತ್ತದೆ.
| ನಾಗೇಂದ್ರ ಸಾಗರ್ ಜೇನು ಸಾಕಣೆದಾರರ ಸಹಕಾರ ಸಂಘದ ಸಂಸ್ಥಾಪಕ