ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್​ ಸಿಂಹ ಕಿಡಿ

rohini sinduri- pratap simha
Published on

ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಮೂರ್ನಾಲ್ಕು ಗಂಟೆ ಸತತವಾಗಿ ಮೀಟಿಂಗ್ ಮಾಡುವುದರಿಂದ ಪ್ರಯೋಜನವಿಲ್ಲ, ಬರೀ ಕಾಲಹರಣ ಆಗುತ್ತೆ ಅಷ್ಟೆ. ಯಾರದ್ದೋ ಹೆಗಲಿಗೆ ಜವಾಬ್ದಾರಿ ಹಾಕಿ ನಾವಂತೂ ಕೂರುವುದಿಲ್ಲ. ಅವರು ಕೆಲಸ ಮಾಡಲಿ, ಬಿಡಲಿ. ನಾವಂತೂ ಸಚಿವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ ಎಂದರು.

ಮೈಸೂರಿನಲ್ಲಿ ಮೂವರು ಐಎಎಸ್ ಅಧಿಕಾರಿಗಳಿದ್ದಾರೆ. ಮಹಾನಗರ ಪಾಲಿಕೆ ಆಯುಕ್ತರು ನಗರ ವ್ಯಾಪ್ತಿ, ಜಿಲ್ಲಾ ಪಂಚಾಯಿತಿ ಸಿಇಒ ಅವರು ಗ್ರಾಮಾಂತರ ಪ್ರದೇಶದ 8 ವಿಧಾನಸಭಾ ಕ್ಷೇತ್ರಗಳ ಕೆಲಸ ಮಾಡುತ್ತಿದ್ದಾರೆ‌. ಜಿಲ್ಲಾಧಿಕಾರಿಗಳು ಮೀಟಿಂಗ್, ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದಾರೆ. ಆದರೆ ಸತತ ಸಭೆಯಿಂದ ಪ್ರಯೋಜನವಿಲ್ಲ ಎಂದು ಪ್ರತಾಪ್​ ಸಿಂಹ ಆಕ್ರೋಶ ಹೊರಹಾಕಿದರು.

ಮೂರನೇ ಅಲೆಗೆ ಸಿದ್ಧತೆ ಆರಂಭಿಸಿದ ಮೊದಲ ಜಿಲ್ಲೆ ಮೈಸೂರು. ಮಹಿಳಾ ಮತ್ತು‌ ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮೈಸೂರಿಗೆ ಬರುತ್ತಾರೆ. ಅವರ ಸಮ್ಮುಖದಲ್ಲೇ ಮನೆ ಮನೆ ಮಕ್ಕಳ ಸರ್ವೆಗೆ ಚಾಲನೆ ಕೊಡಿಸುವ ಚಿಂತನೆಯೂ ಇದೆ. ಜೂನ್ ಅಂತ್ಯದ ವೇಳೆಗೆ ಮನೆ ಮನೆ ಸರ್ವೇ ಮುಗಿಸುತ್ತೇವೆ ಎಂದು 'ದಿಗ್ವಿಜಯ ನ್ಯೂಸ್‌'ಗೆ ಪ್ರತಾಪ್ ಸಿಂಹ ಹೇಳಿದರು.

ಮೈಸೂರು ಜಿಲ್ಲೆ ಅಭಿರಾಮ್ ಜಿ. ಶಂಕರ್, ಶಿಖಾ, ರಂದೀಪ್ ಅವರಂತಹ ಮಾದರಿ ಅಧಿಕಾರಿಗಳನ್ನು ಕಂಡಿದೆ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಅವರು ಕೆಲಸ ಮಾಡಿದ್ದಾರೆ.

ಆ ನಿಟ್ಟಿನಲ್ಲಿ ಈಗಿರುವ ಜಿಲ್ಲಾಡಳಿತವೂ ಕೆಲಸ ಮಾಬೇಕೆಂಬುದು ನಮ್ಮ ನಿರೀಕ್ಷೆ. ಇದರಲ್ಲಿ‌ ವೈಯಕ್ತಿಕತೆಯ ಪ್ರಶ್ನೆ ಇಲ್ಲ. ಸದ್ಯ ಮೈಸೂರಿನಲ್ಲಿ ಮೂವರು ಐಎಎಸ್‌ ಕೇಡರ್ ಅಧಿಕಾರಿಗಳಿದ್ದಾರೆ. ಡಿಸಿ, ಪಾಲಿಕೆ ಆಯುಕ್ತೆ, ಜಿಪಂ ಸಿಇಒ ಇದ್ದಾರೆ. ಇವರು ಒಂದೊಂದು ಟಾಸ್ಕ್ ಫೋರ್ಸ್ ವಹಿಸಿಕೊಂಡು ಕೆಲಸ ಮಾಡಿದರೆ ಉತ್ತಮ. ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಕೋವಿಡ್ ಮಿತ್ರ ಸೇರಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಜನಪ್ರತಿನಿಧಿಗಳು ಕೂಡ ಒಂದೊಂದು ಟಾಸ್ಕ್ ಫೋರ್ಸ್ ಗಳನ್ನು ವಹಿಸಿಕೊಂಡು ಕೆಲಸ ಮಾಡುತ್ತಿದ್ದೇವೆ.

ಆಕ್ಸಿಜನ್, ಬೆಡ್, ಆಸ್ಪತ್ರೆ, ಔಷಧಿ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದೇವೆ. ಜಿಲ್ಲಾಧಿಕಾರಿಗಳು ಕೂಡ ಹೆಚ್ಚುಹೊತ್ತು ಸಭೆ ನಡೆಸುವುದು ಬಿಡಲಿ. ಗ್ರಾಮೀಣ ಭಾಗಕ್ಕೆ ಹೋಗಿ ಕೆಲಸ ಮಾಡಲಿ ಎಂಬುದು‌ ನಮ್ಮ ಅಭಿಪ್ರಾಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net