

ಬಾಗಲಕೋಟೆ: ಹೃದಯಾಘಾತದಿಂದ ನಿನ್ನೆ (ಸೋಮವಾರ) ಮೃತಪಟ್ಟಿದ್ದ ರೈಲ್ವೆ ಟಿಕೆಟ್ ಕಲೆಕ್ಟರ್ಗೆ ಇಂದು ಕರೊನಾ ಪಾಸಿಟಿವ್ ಧೃಡಪಟ್ಟಿದೆ. ಜಿಲ್ಲಾಡಳಿತಕ್ಕೆ ಮಾಹಿತಿ ಸಿಗುವ ಮುನ್ನವೇ ಅನೇಕರು ಮೃತನ ಅಂತಿಮ ದರ್ಶನ ಪಡೆದಿದ್ದು, ಆತಂಕ ಮನೆಮಾಡಿದೆ.
ಬಾಗಲಕೋಟೆ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನಿವಾಸಿ 57 ವರ್ಷದ ವ್ಯಕ್ತಿ ಸೋಮವಾರ ಮೃತಪಟ್ಟಿದ್ದರು. ಹುಬ್ಬಳ್ಳಿ ಮೀರಜ್ ಮಾರ್ಗದ ರೈಲು ಟಿಕೆಟ್ ಕಲೆಕ್ಟರ್ ಆಗಿದ್ದ ಇವರು ಮೂರು ದಿನದ ಹಿಂದೆ ಮೀರಜ್ನಿಂದ ಬಂದಿದ್ದರು. ಇವರು ಮೃತಪಟ್ಟ ಬಳಿಕ ಗಂಟಲು ಮಾದರಿಯನ್ನು ಬಾಗಲಕೋಟೆ ಕೋವಿಡ್ ಆಸ್ಪತ್ರೆಯಲ್ಲಿ ಪರೀಕ್ಷಿಸಲಾಗಿದ್ದು, ಕರೊನಾ ಪಾಸಿಟಿವ್ ಬಂದಿದೆ. ಮತ್ತೊಮ್ಮೆ ವರದಿ ಖಚಿತತೆಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಬೆಂಗಳೂರಿಗೆ ಕಳಿಸಿದ್ದಾರೆ. ಇದನ್ನೂ ಓದಿರಿಮತ್ತೆ 20 ದಿನ ದೇಶಾದ್ಯಂತ ಕಂಪ್ಲೀಟ್ ಲಾಕ್ಡೌನ್?
ಸದ್ಯ ಚಿಕ್ಕ ಮ್ಯಾಗೇರಿ ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ. ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ. ಮೃತರ ಅಂತಿಮ ದರ್ಶನ ಪಡೆಯಲು ಎಷ್ಟು ಜನರು ಭಾಗವಹಿಸಿದ್ದರು ಎಂಬ ಮಾಹಿತಿಯನ್ನು ಜಿಲ್ಲಾಡಳಿತ ಕಲೆ ಹಾಕುತ್ತಿದೆ. ಮೃತನು ಮಹಾರಾಷ್ಟ್ರದಿಂದ ಬಂದಿದ್ದ ಬಗ್ಗೆ ಆತನ ಸಾವಿನ ಬಳಿಕ ಸ್ಥಳೀಯರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.