ರಾತ್ರಿ ನಾಯಿ ಕೂಗದೇ ಇದ್ದಿದ್ದರೆ ಅವರ್ಯಾರೂ ಬದುಕುತ್ತಲೇ ಇರಲಿಲ್ಲ; ಪ್ರಾಣವನ್ನೇ ಪಣಕ್ಕಿಟ್ಟ ಗರ್ಭಿಣಿ ನಾಯಿ

ದೊಗ
Published on

ಮಾಸ್ಕೋ: ನಾಯಿ ನಿಯತ್ತಿನ ಪ್ರಾಣಿಯೆನ್ನುತ್ತಾರೆ. ಒಂದು ಹೊತ್ತಿನ ಊಟ ಹಾಕಿದರೆ, ಜೀವನಪರ್ಯಂತ ಅದರ ಋಣವನ್ನು ನಾಯಿ ಇಟ್ಟುಕೊಂಡಿರುತ್ತದಂತೆ. ಅದೇ ರೀತಿ ಋಣ ಹೊತ್ತಿದ್ದ ನಾಯಿಯೊಂದು ಋಣ ತೀರಿಸುವ ಸಲುವಾಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಘಟನೆ ರಷ್ಯಾದಲ್ಲಿ ನಡೆದಿದೆ.

ಕಳೆದ ತಿಂಗಳು ರಷ್ಯಾದ ಪೀಟರ್ಸ್​ಬರ್ಗ್​ನ ವಿಶ್ರಾಂತಿ ಗೃಹವೊಂದರಲ್ಲಿ ಮಧ್ಯ ರಾತ್ರಿ ಸಮಯಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಆ ವಿಶ್ರಾಂತಿ ಗೃಹದಲ್ಲಿ ನಾಲ್ವರು ರೋಗಿಗಳು ವಾಸಿಸುತ್ತಿದ್ದು, ಅವರೆಲ್ಲರು ಆ ಸಮಯದಲ್ಲಿ ಗಾಢ ನಿದ್ರೆಯಲ್ಲಿದ್ದರು. ಆದರೆ ಬೆಂಕಿ ನೋಡಿದಾಕ್ಷಣ ಎಚ್ಚೆತ್ತುಕೊಂಡ ಮಾಟಿಲ್ದಾ ಹೆಸರಿನ ನಾಯಿ ಜೋರಾಗಿ ಕೂಗಲಾರಂಭಿಸಿದೆ. ನಾಯಿ ಜೋರಾಗಿ ಬೊಗಳುತ್ತಿರುವುದನ್ನು ಕೇಳಿ ರೋಗಿಗಳು ಎಚ್ಚೆತ್ತುಕೊಂಡಿದ್ದಾರೆ. ತಮ್ಮನ್ನು ಬೆಂಕಿ ಆವರಿಸುತ್ತಿರುವುದು ತಿಳಿದು, ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದವರು ನಾಲ್ವರನ್ನು ರಕ್ಷಿಸಿದ್ದಾರೆ.

ರೋಗಿಗಳನ್ನು ಬೆಂಕಿಯಿಂದ ರಕ್ಷಿಸಿದ ನಾಯಿಯನ್ನು ಅಗ್ನಿಶಾಮಕ ದಳ ಮರೆತಿದೆ. ಕೆಲ ಸಮಯದ ನಂತರ ಮಾಧ್ಯಮದವರು ಸ್ಥಳಕ್ಕೆ ತಲುಪಿ, ಅಲ್ಲಿನ ನೇರ ಪ್ರಸಾರ ಮಾಡುವಾಗ ನಾಯಿ ಕಾಣಿಸಿಕೊಂಡಿದೆ. ಬೆಂಕಿಯಿಂದ ತೀವ್ರ ಗಾಯಗೊಂಡಿದ್ದ ನಾಯಿಯನ್ನು ಟಿವಿಯಲ್ಲಿ ನೋಡಿದ ಪ್ರಾಣಿರಕ್ಷಣಾ ತಂಡದ ಸ್ವಯಂಸೇವಕರೊಬ್ಬರು ಸ್ಥಳಕ್ಕೆ ಬಂದು ನಾಯಿಯನ್ನು ರಕ್ಷಿಸಿದ್ದಾರೆ.

ಗಾಯಾಳುವಾಗಿದ್ದ ನಾಯಿಯನ್ನು ಪ್ರಾಣಿಗಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಖ, ಕಾಲುಗಳು ಮತ್ತು ಬೆನ್ನಿನ ಭಾಗದಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ನಾಯಿ ಗರ್ಭಿಣಿಯಾಗಿದ್ದು, ಹೊಟ್ಟೆಯಲ್ಲಿರುವ ಮರಿಗಳಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ಪಶು ವೈದ್ಯರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net