

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಎಂದಾಕ್ಷಣ ಎಲ್ಲರ ಮನದಲ್ಲಿ ಮೂಡುವುದು ನಗುಮುಖ, ಸರಳ ವ್ಯಕ್ತಿತ್ವದ ಅಪ್ಪು ಚಿತ್ರಣ. ಆದರೆ, ಇಂದು ಗತಿಸಿದ ಅತ್ಯಂತ ವಿಷಾದಕರ ಪರಿಸ್ಥಿತಿಯಲ್ಲಿ ಪುನೀತ್ ಮಲಗಿದ್ದ ದೃಶ್ಯ ಮನಕಲಕುತ್ತೆ.
ಶುಕ್ರವಾರ ಬೆಳಗ್ಗೆ ಜಿಮ್ನಲ್ಲಿ ವರ್ಕ್ಔಟ್ ಮಾಡುತ್ತಿದ್ದ ಪುನೀತ್ ರಾಜ್ಕುಮಾರ್ ಅವರು ಕುಸಿದು ಬಿದ್ದಿದ್ದರು. ಕೂಡಲೇ ವಿಕ್ರಂ ಆಸ್ಪತ್ರೆಗೆ ಕರೆತರುವ ಸಂದರ್ಭದಲ್ಲಿ 2 ಬಾರಿ ಹೃದಯಾಘಾತವಾಗಿದ್ದು, ಆಸ್ಪತ್ರೆಯಲ್ಲಿ ಶಾಶ್ವತವಾಗಿ ಕಣ್ಮುಚ್ಚಿ ಮಲಗಿದ್ದ ಪುನೀತ್ರ ಈ ದೃಶ್ಯ ನೋಡಿದ್ರೆ ಕಣ್ಣೀರು ಬರುತ್ತೆ.
ಹಲವು ಅಡೆತಡೆಗಳನ್ನ ದಾಟಿ ಶಿವರಾಜ್ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಂಡಿತ್ತು. ಅತ್ತ ಮೊದಲ ಶೋ ಪ್ರದರ್ಶನ ನಡೆಯುತ್ತಿದ್ದರೆ, ಇತ್ತ ಪುನೀತ್ ರಾಜ್ಕುಮಾರ್ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಯಲ್ಲಿ ಅತ್ಯಂತ ವಿಷಾದನೀಯ ಪರಿಸ್ಥಿತಿ ಮೂಡಿದ್ದರಿಂದ ಭಜರಂಗಿ 2 ಸಿನಿಮಾವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.
ಇನ್ನು ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ವಿಕ್ರಂ ಆಸ್ಪತ್ರೆ ಸುತ್ತಮುತ್ತಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕಂಠೀರವ ಸ್ಟೇಡಿಯಂ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.