

ಶಿವಾನಂದ ತಗಡೂರು, ಬೆಂಗಳೂರು
ದಾಖಲೆಯ ಅವಧಿಗೆ 13 ಬಾರಿ ಬಜೆಟ್ ಮಂಡನೆ ಮಾಡಿದ ಹೆಗ್ಗಳಿಕೆ ಸಿದ್ದರಾಮಯ್ಯ ಅವರದ್ದು. ಈಗ 14ನೇ ಬಜೆಟ್ ಮಂಡಿಸಲು (ಪ್ರಸ್ತುತ ಸರ್ಕಾರದ 2ನೇ ಬಜೆಟ್) ಸಿದ್ಧತೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರತ್ತ ನಾಡು ಆಸೆಗಣ್ಣಿನಿಂದ ನೋಡುತ್ತಿದೆ. ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದರೂ, ಜನಸಾಮಾನ್ಯರ ಬೇಡಿಕೆಗಳ ಪಟ್ಟಿ ಬೆಳೆಯುತ್ತಲೇ ಇದೆ. ಕೃಷಿ, ಕೈಗಾರಿಕೆ, ಮೂಲಸೌಲಭ್ಯ ಸೇರಿದಂತೆ ರೈತರು, ಕಾರ್ವಿುಕರು, ಮಹಿಳೆಯರು, ಮೀನುಗಾರರು, ನೇಕಾರರನ್ನೊಳಗೊಂಡಂತೆ ನಾನಾ ವರ್ಗದ ಜನರ ಆಶೋತ್ತರಗಳಿಗೆ ಬಜೆಟ್ನಲ್ಲಿ ಸ್ಪಂದಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ನಡೆಸಿರುವ ಸಿಎಂಗೆ ಹಲವು ಸವಾಲುಗಳಿವೆ.
ಗ್ಯಾರಂಟಿಗಳನ್ನು ಅನು ಷ್ಠಾನಕ್ಕೆ ತಂದ ಹಿನ್ನೆಲೆಯಲ್ಲಿ ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊರೆ ಬಿದ್ದಿದ್ದು, ಅಭಿವೃದ್ಧಿ ಕಾಮಗಾರಿಗಳ ವೇಗ ಕಡಿಮೆಯಾಗಿದೆ. ವಿರೋಧ ಪಕ್ಷದ ಶಾಸಕರುಗಳಿರಲಿ, ಆಡಳಿತ ಪಕ್ಷದ ಶಾಸಕರುಗಳೇ ಅನುದಾನಕ್ಕಾಗಿ ಬಹಿರಂಗವಾಗಿ ಆಗ್ರಹಿಸುತ್ತಿರುವುದು ವಾಸ್ತ ವಕ್ಕೆ ಹಿಡಿದ ಕನ್ನಡಿ. ಅರ್ಥಿಕತೆಯ ನಿಪುಣರಾದ ಸಿದ್ದರಾಮಯ್ಯ ಅವರಿಗೆ ಈ ಬಾರಿ, ಜನರಿಗೆ ಚುನಾವಣೆಯಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಸವಾಲಾಗಿತ್ತು. ಆ ಕಾರಣಕ್ಕಾಗಿಯೇ ಶಾಸಕರ ಬೇಡಿಕೆಗಳಿಗೆ ಬ್ರೇಕ್ ಹಾಕಿ, ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ‘ನುಡಿದಂತೆ ನಡೆದ ಸರ್ಕಾರ’ ಎನ್ನುವ ಮಾತನ್ನು ಉಳಿಸಿಕೊಂಡು ಸಾರ್ವಜನಿಕ ವಿಶ್ವಾಸಾರ್ಹತೆಯನ್ನು ಕಾಪಿಟ್ಟುಕೊಂಡಿದ್ದಾರೆ. ಈ ವಿಶ್ವಾಸಾರ್ಹತೆಯೇ ಲೋಕಸಭೆ ಚುನಾವಣೆಯಲ್ಲಿ ನೆರವಿಗೆ ಬರಲಿದೆ ಎನ್ನುವುದು ಸಿದ್ದರಾಮಯ್ಯ ಅವರಿಗೆ ಖಚಿತವಾಗಿ ಗೊತ್ತಿದೆ. ಹಾಗಾಗಿಯೇ ಈ ಬಾರಿ ಏನೇ ಟೀಕೆಟಿಪ್ಪಣಿ ಬಂದರೂ, ಚುನಾವಣಾ ಮುನ್ನೋಟವನ್ನು ಇಟ್ಟುಕೊಂಡು ಜನಪ್ರಿಯ ಬಜೆಟ್ ಮಂಡನೆ ಮಾಡಲು ಕಸರತ್ತು ನಡೆಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೂಡ ಕೇಂದ್ರದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಸವಾಲಿನ ವಿರುದ್ಧವೂ ಈಜಲು ಸಿದ್ದರಾಮಯ್ಯ ತಾಲೀಮು ನಡೆಸಿದ್ದಾರೆ. ಕೇಂದ್ರದ ‘ಕಿಸಾನ್ ಸಮ್ಮಾನ್’ ಯೋಜನೆ ಸೇರಿದಂತೆ ಹಲವು ಜನಪರ ಯೋಜನೆಗಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಯೋಜನೆಗಳನ್ನು ಜಾರಿಗೆ ತರಬೇಕು ಎನ್ನುವ ಪ್ರಯತ್ನವೂ ನಡೆದಿದೆ. ಅನ್ನಭಾಗ್ಯ ಯೋಜನೆಯಿಂದ ಹಿಡಿದು, ಹಲವು ಭಾಗ್ಯಗಳ ಯೋಜನೆಗಳ ಹೊಳೆಯನ್ನೇ ಹರಿಸಿದ್ದ ಸಿದ್ದರಾಮಯ್ಯ ಅವರಿಗೆ ಈ ಬಜೆಟ್ ಮಂಡನೆ ನಿಜಕ್ಕೂ ಸವಾಲಿನ ಸಂಗತಿ. ಒಂದು ಕಡೆಯಲ್ಲಿ ಜನಪರ ಯೋಜನೆಗಳನ್ನು ನೀಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳನ್ನು ಗಳಿಸಿಕೊಡಬೇಕು. ಮತ್ತೊಂದು ಕಡೆಯಲ್ಲಿ ಸರ್ಕಾರದ ಬೊಕ್ಕಸದ ಪರಿಸ್ಥಿತಿಯನ್ನು ಸರಿದೂಗಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸಿಎಂ ಸಿಲುಕಿದ್ದಾರೆ.
ಯಡಿಯೂರಪ್ಪ ಸರ್ಕಾರದಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ, ಸೈಕಲ್ ಭಾಗ್ಯ, ಭಾಗ್ಯಲಕ್ಷ್ಮಿ ಯೋಜನೆ ಜನಪ್ರಿಯ ಯೋಜನೆಗಳಾಗಿದ್ದವು. ಎನ್ಡಿಆರ್ಎಫ್ ನಿಯಮಾವಳಿಗಳನ್ನು ಮೀರಿ ರೈತರಿಗೆ ಬೆಳೆ ಪರಿಹಾರ, ಮನೆಹಾನಿ ಪರಿಹಾರ ದುಪಟ್ಟು ಮಾಡಿದ್ದು ಇತಿಹಾಸ. ನೆರೆ ಹಾವಳಿ ಸಂದರ್ಭದಲ್ಲಿ ತೆಗೆದುಕೊಂಡ ಈ ತೀರ್ವನದಿಂದ ಜನರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿತ್ತು. ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡೆದು, ಇದೇ ಮಾದರಿಯ ಯೋಜನೆಯನ್ನು ಜಾರಿಗೆ ತರಬೇಕು ಎನ್ನುವ ತುಡಿತ ಮುಖ್ಯಮಂತ್ರಿಗಳಲ್ಲಿದೆ. ರೈತಾಪಿ ಸಮುದಾಯವೇ ದೊಡ್ಡ ಪ್ರಮಾಣದಲ್ಲಿರುವ ಕಾರಣ, ಅವರನ್ನು ತಲುಪುವ ಮತ್ತು ಪ್ರತಿಯೊಬ್ಬರಿಗೂ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಒಂದಷ್ಟು ಚರ್ಚೆಗಳಾಗಿವೆ. ಹೊಸ ಯೋಜನೆಗಳನ್ನು ಘೋಷಣೆ ಮಾಡಲು ಗ್ಯಾರಂಟಿ ಯೋಜನೆಗಳ ಭಾರವೇ ಹೆಚ್ಚಾಗಿರುವುದು ದೊಡ್ಡ ಸಮಸ್ಯೆಯಾಗಿದೆ.
ಸೂರು ಹೊಂದುವ ಕನಸು: ಗ್ರಾಮೀಣ ಮತ್ತು ನಗರ ಭಾಗದ ಜನರಿಗೆ ತಲೆ ಮೇಲೊಂದು ಸೂರು ಹೊಂದುವ ದಶಕಗಳ ಕನಸು ಇನ್ನೂ ಪೂರ್ಣಪ್ರಮಾಣದಲ್ಲಿ ಈಡೇರಿಲ್ಲ. ಮಧ್ಯಮವರ್ಗದ ಮತ್ತು ಶ್ರಮಿಕ ಜನರು, ಕೂಲಿಕಾರ್ವಿುಕರು ನಗರದಲ್ಲಿ ಸ್ವಂತ ಸೂರು ಕಾಣುವುದು ಇನ್ನೂ ಕನಸಾಗಿಯೇ ಉಳಿದಿದೆ. ಅದಕ್ಕಾಗಿ ವಿಶೇಷ ವಸತಿ ಯೋಜನೆಗಳನ್ನು ರೂಪಿಸಿ, ಪ್ರತಿಯೊಬ್ಬರಿಗೂ ಸೂರು ಕಲ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಮನೆಗಳ ನಿರ್ಮಾಣ ಸಂಖ್ಯೆಯನ್ನು ದುಪ್ಪಟ್ಟು ಮಾಡಿ ಅದಕ್ಕೆ ಅನುದಾನ ಒದಗಿಸಬೇಕು.
ಸಬ್ಸಿಡಿ ಹೆಚ್ಚಳ ಬೇಡಿಕೆ: ರಾಜ್ಯ ಸರ್ಕಾರವೇ ಪ್ರತಿ ರೈತರಿಗೆ 5 ಲಕ್ಷ ರೂ. ವಿಮೆ ಮಾಡಿಸಿ ರೈತ ವಿಮಾ ಯೋಜನೆ ಜಾರಿಗೆ ತರಬೇಕು. ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ಕೇಂದ್ರಗಳು ಪ್ರತಿ ಹೋಬಳಿಯಲ್ಲಿಯೂ ಪ್ರಾರಂಭಿಸಬೇಕು. ಕೃಷಿ ಯಂತ್ರೋಪಕರಣ ಮತ್ತು ರಸಗೊಬ್ಬರದ ಸಬ್ಸಿಡಿ ಹೆಚ್ಚಳ ಮಾಡಬೇಕು ಎನ್ನುವುದು ರೈತರ ಬಹುವರ್ಷಗಳ ಬೇಡಿಕೆ. ಸಣ್ಣ, ಅತಿಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಬೇಕು. ಬರ ಪರಿಹಾರ ಮೊತ್ತವನ್ನು ಎಕರೆಗೆ ಕನಿಷ್ಠ 10 ಸಾವಿರ ರೂ. ಮಾಡಬೇಕು. ಶೂನ್ಯ ಬಡ್ಡಿ ದರದ ಸಾಲ ಎಲ್ಲ ಕೃಷಿಕರಿಗೂ ಲಭ್ಯವಾಗುವಂತೆ ಮಾಡಬೇಕು ಎನ್ನುವುದು ರೈತರ ಹಕ್ಕೋತಾಯ.
ರೈತ ಆವರ್ತ ನಿಧಿ: ರೈತ ಆವರ್ತ ನಿಧಿಗೆ ಕನಿಷ್ಠ 1 ಸಾವಿರ ಕೋಟಿ ರೂ. ಮೀಸಲಿಡಬೇಕು. ಬೆಳೆಯ ಬೆಲೆ ಕುಸಿದ ಸಂದರ್ಭದಲ್ಲಿ ಮಾರುಕಟ್ಟೆ ಪ್ರವೇಶ ಮಾಡಿ ಸರ್ಕಾರವೇ ಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸುವ ನಿಟ್ಟಿನಲ್ಲಿ ಇರುವ ನಿಯಮಾವಳಿಗಳ ಕಟ್ಟುಪಾಡುಗಳನ್ನು ಸಡಿಲಿಸಿ, ಸರಳ ನಿಯಮಾವಳಿ ರೂಪಿಸಲು ಕ್ರಮ ಕೈಗೊಳ್ಳಬೇಕು.
ಕಬ್ಬು ಬೆಳೆಗಾರರು: ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಆದ್ಯತೆ ಮೇಲೆ ಈಡೇರಿಸಬೇಕು. ಎಫ್ಆರ್ಪಿ ಆಧಾರದಲ್ಲಿ ದರ ನಿಗದಿ ಬದಲು, ರೈತನ ಹೊಲದಲ್ಲಿಯೇ ದರ ನಿಗದಿ ಆಗುವ ವ್ಯವಸ್ಥೆ ಬರಬೇಕು. ಕಾರ್ಖಾನೆಗಳು ಕಾಲಮಿತಿಯೊಳಗಾಗಿ ರೈತರಿಗೆ ಹಣ ನೀಡುವ ವ್ಯವಸ್ಥೆ ಆಗಬೇಕು.
ಹಾಲು ಉತ್ಪಾದಕರಿಗೆ ಪ್ರೋತ್ಸಾಹ: ಈ ಬಾರಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ಗೆ 10 ರೂ. ಪ್ರೋತ್ಸಾಹಧನ ನೀಡಬೇಕು. ಹೈನುಗಾರಿಕೆ ಅವಲಂಬಿಸುವ ರೈತಾಪಿ ಜನರಿಗೆ ಅನುಕೂಲ ಕಲ್ಪಿಸಲು ಕೆಲ ಸಬ್ಸಿಡಿ ಯೋಜನೆಯನ್ನು ಜಾರಿಗೆ ತರಬೇಕು.
ದಾಖಲಾತಿಗಳನ್ನು ಸರಿಪಡಿಸಿ: ರೈತರು ತಮ್ಮ ಜಮೀನಿನ ದಾಖಲಾತಿಗಳನ್ನು ಸರಿಪಡಿಸಿಕೊಳ್ಳುವುದಕ್ಕೆ ಹಗಲಿರಳು ಸರ್ಕಸ್ ಮಾಡಬೇಕಿದೆ. ಅದಕ್ಕಾಗಿ ನಾಡ ಕಚೇರಿ, ತಹಸೀಲ್ದಾರ್ ಕಚೇರಿಗಳಿಗೆ ಎಡತಾಕುವುದು, ಪಹಣಿ, ಪೋಡಿ, ದುರಸ್ತಿ ಮಾಡಿಸಿಕೊಳ್ಳಲು ಹರಸಾಹಸ ಮಾಡುವುದು ಇನ್ನೂ ತಪ್ಪಿಲ್ಲ. ಮನೆ ಬಾಗಿಲಗೇ ಸರ್ಕಾರ, ಮನೆ ಬಾಗಿಲಿಗೆ ದಾಖಲಾತಿಗಳು ಎಂದು ಸರ್ಕಾರ ಘೋಷಣೆ ಮಾಡುತ್ತ ಪ್ರಚಾರ ಪಡೆದಿದ್ದರೂ ಏನೂ ಪ್ರಯೋಜನವಾಗಿಲ್ಲ. ಇದಕ್ಕಾಗಿ ಸರಿಯಾದ ಕಾರ್ಯಕ್ರಮ ರೂಪಿಸಬೇಕು.
ಸಾಲಮನ್ನಾ ನಿರೀಕ್ಷೆಯಲ್ಲಿ ರೈತರು: ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ನಾಡಿನ ರೈತಾಪಿ ಜನರು ಬರದ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕುಡಿಯುವ ನೀರಿಗೂ ತತ್ವಾರದ ಸ್ಥಿತಿ ಇದೆ. ಜನ ಜಾನುವಾರುಗಳ ಪರಿಸ್ಥಿತಿಯಂತೂ ಹೇಳತೀರದು. ಬರ ಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಕ್ರಮ ಕೈಗೊಂಡಿದ್ದರೂ, ಅದು ಪೂರ್ಣಪ್ರಮಾಣದ ಪರಿಹಾರವಾಗಲಾರದು. ಬರ ಇರುವ ಕಾರಣಕ್ಕಾಗಿ ಈ ಬಾರಿ ರೈತರ ಸಾಲವನ್ನು ಸಂಪೂರ್ಣವಾಗಿ ಒಮ್ಮೆ ಮನ್ನಾ ಮಾಡಲಿ ಎನ್ನುವುದು ರೈತ ಸಮುದಾಯದ ನಿರೀಕ್ಷೆ. ಹಿಂದಿನ ಅವಧಿ ಸರ್ಕಾರದಲ್ಲಿ 50 ಸಾವಿರ ರೂಪಾಯಿ ಸಾಲ ಮನ್ನಾ ಮಾಡಿದ್ದ ಸಿದ್ದರಾಮಯ್ಯ ಈ ಬಾರಿ ಸಾಲ ಮನ್ನಾ ಮಾಡಲು ಮುಂದಾಗುವರೇ? ನೋಡಬೇಕು.
ಕೊಬ್ಬರಿ ಬೆಂಬಲ ಬೆಲೆ: ಕೊಬ್ಬರಿ ಬೆಲೆ ಪಾತಾಳದಾಳಕ್ಕೆ ಇಳಿದಿದೆ. ಕ್ವಿಂಟಾಲ್ ಕೊಬ್ಬರಿಯನ್ನು 17ರಿಂದ 18 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದ ಬೆಳಗಾರರು ಈಗ 7 ರಿಂದ 8 ಸಾವಿರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ‘ನಾವು ಅಧಿಕಾರಕ್ಕೆ ಬಂದರೆ ಕೊಬ್ಬರಿ ಬೆಂಬಲ ಬೆಲೆಯನ್ನು 15 ಸಾವಿರಕ್ಕೆ ಏರಿಸುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಿಸಿದ್ದರು. ರಾಜ್ಯ ಸರ್ಕಾರ ಕ್ವಿಂಟಾಲ್ಗೆ 1500 ರೂ. ಬೆಂಬಲ ಬೆಲೆ ಏರಿಕೆ ಮಾಡಿದ್ದರಿಂದ 13,500 ರೂ.ಗೆ ತಲುಪಿದೆ. ಇನ್ನೂ 1500 ರೂ. ಏರಿಕೆ ಮಾಡಿ ಸರ್ಕಾರ ಮಾತು ಉಳಿಸಿಕೊಳ್ಳಬೇಕು ಎನ್ನುವುದು ಬೆಳೆಗಾರರ ಆಗ್ರಹ.
ಕೈಗಾರಿಕೆಗಳ ನಿರೀಕ್ಷೆ: ದೇಶ-ವಿದೇಶದ ಜನರು ಬೆಂಗಳೂರಿನತ್ತ ಬರುತ್ತಾರೆ. ಅಷ್ಟರ ಮಟ್ಟಿಗೆ ರಾಜ್ಯ ಐಟಿ, ಬಿಟಿ ಮತ್ತು ಕೈಗಾರಿಕೆಯಲ್ಲಿ ಗಮನ ಸೆಳೆದಿದೆ. ಆದರೆ, ಕೈಗಾರಿಕೆಗಳಿಗೆ ಮೂಲಸೌಕರ್ಯ ಕಲ್ಪಿಸಿಕೊಡಲು ಸರ್ಕಾರ ಹೆಚ್ಚಿನ ಅನುದಾನ ನೀಡುತ್ತಿಲ್ಲ ಎನ್ನುವುದು ದೂರು. ಈ ಬಾರಿಯಾದರೂ ಹೆಚ್ಚು ಅನುದಾನ ಸಿಗಬಹುದು ಎನ್ನುವ ನಿರೀಕ್ಷೆ ಕೈಗಾರಿಕೋದ್ಯಮದ್ದು. ವಿದ್ಯುತ್ನ್ನು ರಿಯಾಯಿತಿ ದರದಲ್ಲಿ ಸರಬರಾಜು ಮಾಡಿ ಪ್ರೋತ್ಸಾಹ ನೀಡಬೇಕು ಎನ್ನುವ ಆಗ್ರಹವೂ ಇದೆ.
ಚಿತ್ರನಗರಿ ಕನಸು: ಚಿತ್ರನಗರಿ ಆಗಬೇಕು ಎನ್ನುವುದು ದಶಕಗಳ ಕನಸು ಇನ್ನೂ ಈಡೇರಿಲ್ಲ. ಈ ವರ್ಷವಾದರೂ ಬಜೆಟ್ನಲ್ಲಿ ಅದಕ್ಕೆ ಅನುದಾನ ಸಿಗುವ ನಿರೀಕ್ಷೆಯಲ್ಲಿದೆ ಚಿತ್ರೋ ದ್ಯಮ. ಕಿರುತೆರೆ ಸೇರಿ ಚಿತ್ರೋದ್ಯಮವನ್ನು ಆದ್ಯತೆಯಾಗಿಟ್ಟುಕೊಂಡು ಜನತಾ ಚಿತ್ರಮಂದಿರ ಕಲ್ಪನೆಯಲ್ಲಿ ಯೋಜನೆಯನ್ನು ಪ್ರಕಟಿಸಬೇಕು. ಕನ್ನಡ ಚಿತ್ರಗಳ ಸಬ್ಸಿಡಿ ಹೆಚ್ಚಳ, ಪ್ರಶಸ್ತಿ ಹಣ ದುಪ್ಪಟ್ಟು ಮಾಡಬೇಕು. ಕನ್ನಡ ಚಿತ್ರಗಳಿಗೆ ಕೆಎಸ್ಜಿಎಸ್ಟಿ ವಿನಾಯಿತಿ ಕೊಡಬೇಕು ಎನ್ನುವ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.