

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಸಾರ್ವಜನಿಕರಿಗೆ ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ವಸಂತನಗರ ನಿವಾಸಿ ಗಣೇಶ್ ಅಲಿಯಾಸ್ ಗಣಿ ಬಂಧಿತ. ವಿಚಾರಣೆ ವೇಳೆ 2007ರಲ್ಲಿ ಡಕಾಯಿತಿ, ಸುಲಿಗೆ ಸೇರಿ 7 ಪ್ರಕರಣಗಳು ಬೆಳಕಿಗೆ ಬಂದಿವೆ. ಈತನಿಂದ ಬೆದರಿಕೆಗೆ ಒಳಗಾಗಿದ್ದರೇ ದೂರು ಕೊಡುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಕ್ಯಾಬ್ ಚಾಲಕನಾಗಿದ್ದ ಗಣೇಶ್, ಉತ್ತಮ ಭಾರತ ಮೂಲದವರನ್ನೇ ಟಾರ್ಗೆಟ್ ಮಾಡುತ್ತಿದ್ದ. ಅಂಗಡಿ ಮುಂದೆ ಅಥವಾ ಇನ್ನಿತ್ತರ ಪ್ರದೇಶದಲ್ಲಿ ಸಿಗರೇಟ್ ಸೇದುತ್ತಿದ್ದರೇ ಹಿಂಬಾಲಿಸಿಕೊಂಡು ಹೋಗಿ ಪೊಲೀಸ್ ಎಂದು ಹೆದರಿಸುತ್ತಿದ್ದ. ನಾನು ಪೊಲೀಸ್. ಈಗ ತಾನೇ ಗಾಂಜಾ ಸೇವನೆ ಮಾಡಿರುವುದನ್ನು ನೋಡಿದ್ದೆನೆ. ನಿಮ್ಮ ಮೇಲೆ ಮತ್ತೊಂದು ತಂಡ ನಿಗಾ ವಹಿಸುತ್ತಿದ್ದೆ. ಕೇಸ್ ದಾಖಲಿಸದೇ ಇರಲು ಹಣ ಕೊಡಬೇಕೆಂದು ಬೆದರಿಸಿ ನಗದು ಮತ್ತು ಚಿನ್ನಾಭರಣ ಸುಲಿಗೆ ಮಾಡುತ್ತಿದ್ದ. ಆನಂತರ ಎಟಿಎಂ ಬೂತ್ ಬಳಿಗೆ ಕರೆದೊಯ್ದು ಗಣೇಶ್, ದೂರದಲ್ಲಿ ನಿಂತು ಕೊಂಡು ಅವರ ಬಳಿ ಹಣ ಡ್ರಾ ಮಾಡಿಸಿಕೊಳ್ಳುತ್ತಿದ್ದ. ಅದು ಸಾಕಾಗಿಲ್ಲ ಎಂದಾದರೇ ಮತ್ತೆ ಕ್ಯೂಆರ್ ಕೋಡ್ ಕೊಟ್ಟು ಅದಕ್ಕೆ ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಿದ್ದ.
ಇದೇ ರೀತಿ ಡಿ.17ರ ರಾತ್ರಿ 9.30ರಲ್ಲಿ ಉತ್ತರ ಭಾರತ ಮೂಲದ ದಂಪತಿ, ಸಿಗರೇಟ್ ಸೇದುಕೊಂಡು ಮನೆಗೆ ಹೋಗಿದ್ದರು. ಹಿಂಬಾಲಿಸಿಕೊಂಡು ಹೋದ ಗಣೇಶ್, ಪೊಲೀಸ್ ಎಂದು ಬೆದರಿಸಿ ಮನೆಯಲ್ಲಿ ಇದ್ದ ಬೆಲೆಬಾಳುವ ವಸ್ತುಗಳನ್ನು ಕೊಡುವಂತೆ ಬೇಡಿಕೆ ಒಡ್ಡಿದ್ದ. ಅದಕ್ಕೆ ಒಪ್ಪದೆ ಇದ್ದಾಗ ದಂಪತಿಯನ್ನು ಸರ್ಜಾಪುರ ರಸ್ತೆಗೆ ಕರೆದೊಯ್ದು ಎಟಿಎಂನಲ್ಲಿ ಹಣ ಡ್ರಾ ಮಾಡಿಸಿಕೊಂಡಿದ್ದ. ಬಳಿಕ ದಂಪತಿಯನ್ನು ಆಕೆಯ ಮನೆ ಬಳಿ ಬಿಟ್ಟು ಪರಾರಿಯಾಗಿದ್ದ.
ಇದಾದ ಮೇಲೆ ಸ್‌ಟಾವೇರ್ ಇಂಜಿನಿಯರ್‌ಗೂ ಬೆದರಿಸಿ ಎಟಿಎಂ ಮತ್ತು ಕ್ಯೂಆರ್ ಕೋಡ್ ಸ್ಕಾೃನ್ ಮಾಡಿಸಿ ಹಣ ಸುಲಿಗೆ ಮಾಡಿದ್ದ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು. ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.