

ಬೆಂಗಳೂರು: ನಗರದ ಕೆಲವೆಡೆ ಪೇಟಿಎಂ ಕ್ಯೂ ಆರ್ ಕೋಡ್ ಮಾದರಿಯಲ್ಲಿ ರಾತ್ರೋರಾತ್ರಿ ಸಿಎಂ ಬೊಮ್ಮಾಯಿ ಫೋಟೋ ಸಹಿತ 'ಪೇ ಸಿಎಂ' ಪೋಸ್ಟರ್ ಅಂಟಿಸಿ ಕಾಂಗ್ರೆಸ್ ಅಭಿಯಾನ ನಡೆಸಿದೆ.
ರೇಸ್ ಕೋರ್ಸ್ ರೋಡ್ ಸೇರಿದಂತೆ ಬೆಂಗಳೂರು ನಗರದ ಹಲವೆಡೆ QR ಕೋಡ್ ಇರುವ 'PAY CM' ಪೋಸ್ಟರ್‌ಗಳು ಕಂಡು ಬಂದಿದ್ದು, ಈ ಪೋಸ್ಟರ್ ವಿರುದ್ಧ ಸಿಎಂ ಗರಂ ಆಗಿದ್ದಾರೆ.
ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ 40% ಕಮಿಷನ್ ನಡೆಯುತ್ತಿದೆ ಎಂದು ಟೀಕಿಸುತ್ತಿರುವ ಕಾಂಗ್ರೆಸ್, ಸರ್ಕಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಚಾಟಿ ಬೀಸುತ್ತಿದೆ. ಇನ್ನು ಈ ಪೋಸ್ಟರ್ ಹಾಕಿದ್ದು ಯಾರೆಂದು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಪೋಸ್ಟರ್ ಅಂಟಿಸಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ರೇಸ್ ಕೋರ್ಸ್ ಬಳಿ ಹಾಕಿದ್ದ 'ಪೇಸಿಎಂ' ಪೋಸ್ಟರ್ಗಳನ್ನು ಪೊಲೀಸ್ ಸಿಬ್ಬಂದಿಗಳು ಕಿತ್ತುಹಾಕಿದ್ದಾರೆ. ಇನ್ನು ಕೆಲವೆಡೆ ಆಟೋ ಡ್ರೈವರ್ಗಳು ಮತ್ತು ಸಾರ್ವಜನಿಕರು ಹಣ ಬರುತ್ತೆ ಎಂದು ಸ್ಕ್ಯಾನ್ ಮಾಡುತ್ತಿದ್ದ ದೃಶ್ಯವೂ ಕಂಡು ಬಂತು. 'ಪೇ ಸಿಎಂ' ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಆರೋಪ, ಪಿಎಸ್ಐ ಎಕ್ಸಾಂ ಹಗರಣ ಸೇರಿದಂತೆ ಹಲವು ಮಾಹಿತಿ ಬರುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಯಾರು ಪೋಸ್ಟರ್ ಹಾಕಿದ್ದಾರೆ ಅವರನ್ನು ಪತ್ತೆ ಮಾಡಲಾಗ್ತಿದೆ. ಈ ಬಗ್ಗೆ ಡಿಸಿಪಿ ಸೆಂಟ್ರಲ್ ತನಿಖೆ ಮಾಡ್ತಾ ಇದ್ದಾರೆ. ಎಲ್ಲೆಲ್ಲಿ ಪೋಸ್ಟರ್ ಹಾಕಿದ್ದಾರೆ ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದೀವಿ. ಕರ್ನಾಟಕ ಪಬ್ಲಿಕ್ ಪೋಸ್ಟ್ ಡಿಸ್ಪಿಗರ್ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಾಗಿದೆ. ತನಿಖೆ ಮುಂದುವರಿದಿದೆ ಎಂದು ವಿವರಿಸಿದ್ದಾರೆ. ಇನ್ನು 'ಪೇ ಸಿಎಂ' ಪೋಸ್ಟರ್ ವಿರುದ್ಧ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.