ಚಿಕ್ಕಬಳ್ಳಾಪುರ: ತುರ್ತು ಅಗತ್ಯಕ್ಕಾಗಿ ಖಾಸಗಿ ಆ್ಯಪ್ಗಳ ಮೂಲಕ ಸಾಲ ಪಡೆಯುವ ಮುನ್ನ ಜೋಕೆ! ಇಲ್ಲೊಬ್ಬ ತಗೊಂಡ 10 ಸಾವಿರ ರೂಪಾಯಿ ಸಾಲಕ್ಕೆ ಬರೋಬ್ಬರಿ 7 ಲಕ್ಷ ರೂಪಾಯಿ ಪಾವತಿಸಿದ್ದಾನೆ. ಅಷ್ಟೇ ಅಲ್ಲ, ನಿರಂತರ ಕಿರುಕುಳ ಮತ್ತು ಬೆದರಿಕೆಗೆ ಸಿಲುಕಿ ನಲುಗಿದ್ದಾರೆ.
ಚಿಂತಾಮಣಿ ತಾಲೂಕಿನ ಜಿಯೋ ಭೋರ್ ಕಂಪನಿ ವ್ಯವಸ್ಥಾಪಕ ಬುರಡಗುಂಟೆಯ ವಿನೋದ್ (33) ವಂಚನೆಗೊಳಗಾದವರು. ನ್ಯಾಯಕ್ಕಾಗಿ ಇವರೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 2021ರ ಡಿ.27ರಂದು ವಿನೋದ್ರ ಸ್ನೇಹಿತ ಚಲಪತಿಗೆ ಅಪಘಾತವಾಗಿತ್ತು. ತುರ್ತು ಹಣಕ್ಕಾಗಿ ವಿನೋದ್, ಗೂಗಲ್ನಲ್ಲಿ ಸಾಲ ನೀಡುವ ಆ್ಯಪ್ ಡೌನ್ಲೌಡ್ ಮಾಡಿಕೊಂಡು ಬ್ಯಾಂಕ್ ಖಾತೆ ಲಿಂಕ್ ಮಾಡಿ, ಎರಡು ಹಂತದಲ್ಲಿ ತಲಾ 5 ಸಾವಿರ ರೂ. ಸಾಲ ಪಡೆದುಕೊಂಡಿದ್ದರು. ಆದರೆ, ಖಾತೆಗೆ ಬಡ್ಡಿ ಹೋಗಿ 5,962 ಜಮಾ ಆಗಿದೆ. ಇದರ ಸಾಲ ತೀರಿಸಲು ಮತ್ತೊಂದು ಆ್ಯಪ್ನಲ್ಲಿ 4,180 ರೂ. ಮತ್ತು 3,400 ರೂ. ಸಾಲ ಪಡೆದುಕೊಂಡಿದ್ದರು. ಕೊನೆಗೆ ಸಾಲ ಮತ್ತು ಬಡ್ಡಿ ಸೇರಿ 20 ಸಾವಿರ ರೂಪಾಯಿ ಪಾವತಿಸಿ, ವ್ಯವಹಾರ ಮುಗಿಸಿದ್ದಾರೆ. ಆದರೆ ಸಾಲ ಕಟ್ಟಲು ತಡ ಮಾಡಿದ್ದಕ್ಕೆ ಒಂದು ದಿನಕ್ಕೆ 10 ಸಾವಿರ ರೂ.ನಂತೆ ಹಣ ಕಟ್ಟುವಂತೆ ವಿನೋದ್ಗೆ ಹೇಳಿದ್ದಾರೆ. ಅನಿವಾರ್ಯವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ನಿಂದ 2,42,029 ರೂಪಾಯಿ ಮತ್ತು ಯೂನಿಯನ್ ಬ್ಯಾಂಕ್ನಿಂದ 4,58,160 ರೂ. ಸೇರಿ 7,00,189 ಕಟ್ಟಿದ್ದಾರೆ. ಆದರೂ ಬಿಡದೆ ಮತ್ತೊಮ್ಮೆ 1,50,000 ರೂ. ಪಾವತಿಗೆ ಒತ್ತಡ ಹೇರಿದ್ದಾರೆ. ಹಣ ಕಟ್ಟದಿದ್ದಲ್ಲಿ ಮಗಳ ಫೋಟೋವನ್ನು ಬೇರೆಯವರಿಗೆ ಪೋಸ್ಟ್ ಮಾಡುವುದಾಗಿ ವಿನೋದ್ಗೆ ಬೆದರಿಸಿದ್ದಾರೆ.
ಇವರ ಕಾಟಕ್ಕೆ ನಲುಗಿದ ವಿನೋದ್ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಗಳ ಫೋಟೋ ಅಥವಾ ಹಣ ಪಾವತಿಸುತ್ತಿಲ್ಲ ಎಂಬ ಪೋಸ್ಟ್ ಅನ್ನು ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಳುಹಿಸುವ ಬೆದರಿಕೆಯೊಡ್ಡಲಾಗುತ್ತಿದೆ ಎಂದು ದೂರುದಾರ ವಿನೋದ್ ಆರೋಪಿಸಿದ್ದಾರೆ. ನಿರಂತರವಾಗಿ ಮೊಬೈಲ್ ಕರೆ ಮಾಡಿ, ಹೆಚ್ಚಿನ ಹಣ ಪಾವತಿಗೆ ಒತ್ತಡ ಹೇರಲಾಗುತ್ತಿದೆ. ಬ್ಯಾಂಕಿನ ಲಿಂಕ್ಗಳನ್ನು ಕಳುಹಿಸಿ ಹಣ ಲಪಟಾಯಿಸುತ್ತಾರೆ ಇಲ್ಲವೇ ಜನರಲ್ಲಿ ತಪ್ಪು ಭಾವನೆ ಮೂಡುವಂತೆ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಮೂಲಕ ಸಾವಿರ ರೂ.ಗಳಲ್ಲಿ ಸಾಲ ನೀಡಿ, ಲಕ್ಷಾಂತರ ರೂಪಾಯಿಯನ್ನು ಬಲವಂತವಾಗಿ ವಸೂಲಿ ಮಾಡಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಹಿಂದೆ ಅಕ್ರಮ ದುಬಾರಿ ಬಡ್ಡಿ ದರದ ಲೆಕ್ಕದಲ್ಲಿ ಹಲವರಿಗೆ ಕಿರುಕುಳ ನೀಡಿದ ಚೈನಾ ಆ್ಯಪ್ಗಳಿಗೆ ಪೊಲೀಸರು ಕಡಿವಾಣ ಹಾಕಿರುವುದರ ನಡುವೆಯೇ ಸಾಲ ಮತ್ತು ಬಡ್ಡಿ ವ್ಯವಹಾರಕ್ಕೆ ನಲುಗುತ್ತಿರುವುದಾಗಿ ವಿನೋದ್, ಜಿಲ್ಲಾ ಅಪರಾಧ ದಳಕ್ಕೆ ದೂರು ನೀಡಿದ್ದಾರೆ.
https://www.vijayavani.net/a-radio-jocky-rj-rachana-is-no-more/
‘ಶಿವಮೊಗ್ಗದ ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು ಹೋದ… ಹುಡುಗಿ ಜತೆ ಹೋದ… ಕೇಸ್ ಇಲ್ಲ’