ಕರ್ನಾಟಕಕ್ಕೂ ವಕ್ಕರಿಸಿದ ಒಮಿಕ್ರಾನ್​: ಇಬ್ಬರಲ್ಲಿ ಸೋಂಕು ಪತ್ತೆ, ದೇಶದಲ್ಲಿ ಇದೇ ಮೊದಲ ಪ್ರಕರಣ

Corona
Published on

ಬೆಂಗಳೂರು: ಕರೊನಾ, ಡೆಲ್ಟಾ ಸೋಂಕಿನ ಭೀತಿ ನಡುವೆ ವಿಶ್ವದೆಲ್ಲೆಡೆ ಮತ್ತಷ್ಟು ತಲ್ಲಣ ಮೂಡಿಸಿರುವ ಒಮಿಕ್ರಾನ್​ ಕರ್ನಾಟಕಕ್ಕೂ ವಕ್ಕರಿಸಿದೆ. ರೂಪಾಂತರಿ ಹೊಸ ವೈರಸ್​ ಒಮಿಕ್ರಾನ್​ ಗುರುವಾರ ರಾಜ್ಯದ ಇಬ್ಬರಲ್ಲಿ ದೃಢಪಟ್ಟಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಸೋಂಕಿತರ ಪೈಕಿ ಒಬ್ಬನ ವಯಸ್ಸು 66, ಮತ್ತೊಬ್ಬನ ವಯಸ್ಸು 46. ಇವರಿಬ್ಬರೂ ದಕ್ಷಿಣ ಆಫ್ರಿಕಾದಿಂದ ಕರ್ನಾಟಕಕ್ಕೆ ಬಂದಿದ್ದಾರೆ. ತಪಾಸಣೆ ಮಾಡಿದಾಗ ಇಬ್ಬರಲ್ಲೂ ಒಮಿಕ್ರಾನ್​ ಸೋಂಕು ದೃಢಪಟ್ಟಿದೆ. ಆ ಮೂಲಕ ಭಾರತ ದೇಶದಲ್ಲೇ ಇದು ಮೊದಲ ಪ್ರಕರಣ ಆಗಿದೆ.

ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್​ ಅಗರ್​ವಾಲ್​ ಅವರು ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಖಚಿತ ಪಡಿಸಿದ್ದಾರೆ. ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗಿದ್ದು, ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಜನತೆ ಭಯ ಪಡಬೇಡಿ. ಆದರೆ ಜಾಗ್ರತೆ ವಹಿಸಿ ಎಂದು ತಿಳಿಸಿದ್ದಾರೆ.

ದೆಹಲಿ ಪ್ರವಾಸದಲ್ಲಿರುವ ಸಿಎಂ ಬೊಮ್ಮಾಯಿ, ಕರ್ನಾಟಕದಲ್ಲಿ ಒಮಿಕ್ರಾನ್​ ಕೇಸ್​ ಪತ್ತೆಯಾಗಿದ್ದರ ಕುರಿತು ಮಾತನಾಡಿದ್ದಾರೆ. ಕರ್ನಾಟಕಕ್ಕೆ ಇದೊಂದು ದೊಡ್ಡ ಸವಾಲು. ಒಮಿಕ್ರಾನ್​ ತಡೆಯೋ ಬಗ್ಗೆ ತಜ್ಞರ ಜತೆ ಚರ್ಚಿಸಿದ್ದೇವೆ, 13 ದೇಶದಲ್ಲಿ ಒಮಿಕ್ರಾನ್​ ಹೆಚ್ಚಾಗಿದೆ. ಪ್ರತಿ ವಿದೇಶಿ ಪ್ರವಾಸಿಗರ ಮೇಲೆ ನಿಗಾ ಇಟ್ಟಿದ್ದೇವೆ. ವಿದೇಶದಿಂದ ಬಂದವರಿಗೆ 7 ದಿನ ಕ್ವಾರಂಟೈನ್​ ಮಾಡಲಾಗುತ್ತಿದೆ. ಮಾನಮ್ಮ ಜನರ ಆರೋಗ್ಯ ರಕ್ಷಣೆಯನೇ ನಮ್ಮ ಆದ್ಯ ಕರ್ತವ್ಯ. ಒಬ್ಬನಿಂದ ಇಡೀ ನಗರಕ್ಕೆ ಸೋಂಕು ಹರಡುವುದನ್ನು ತಡೆಯಬೇಕು ಎಂದು ಸಿಎಂ ಹೇಳಿದ್ದಾರೆ.

ಈಗಾಗಲೇ ಜಗತ್ತಿನಾದ್ಯಂತ ಸದ್ದು ಮಾಡುತ್ತಿರುವ ರೂಪಾಂತರಿ ಕರೊನಾ ‘ಒಮಿಕ್ರಾನ್​’ ಸಾಕಷ್ಟು ಆತಂಕವನ್ನು ಮೂಡಿಸಿದೆ. ಒಮಿಕ್ರಾನ್​ ಅಷ್ಟೇನೂ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಅದು ಜಾಗತಿಕವಾಗಿ ಅಪಾಯಕಾರಿ ಎಂಬ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ. ಕೋವಿಡ್​ನ ಹೊಸ ರೂಪಾಂತರಿ ಒಮಿಕ್ರಾನ್​ ಅಧಿಕ ಮ್ಯುಟೇಷನ್​ ಹೊಂದಿದ್ದು, ರೋಗನಿರೋಧಕ ಶಕ್ತಿಯನ್ನೂ ದಾಟಿ ವ್ಯಾಪಕವಾಗಿ ಹರಡಬಲ್ಲಂಥದ್ದು ಎಂಬುದು ತಿಳಿದುಬಂದಿದೆ. ಅದಾಗ್ಯೂ ಒಮಿಕ್ರಾನ್​ ಕುರಿತು ಖಚಿತ ಮಾಹಿತಿಗಳ ಕೊರತೆ ಇನ್ನೂ ಇರುವುದಾಗಿಯೂ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ನಡುವೆ ಬೆಂಗಳೂರಲ್ಲಿ ಒಬ್ಬರಿಗೆ ಒಮಿಕ್ರಾನ್​ ಸೋಂಕು ದೃಢಪಟ್ಟಿದ್ದು, ಬೆಂಗಳೂರು ಮಾತ್ರವಲ್ಲ, ದೇಶದ ಜನರಲ್ಲೂ ಆತಂಕ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net