ಬೆಂಗಳೂರು: ಬಡ, ಮಧ್ಯಮ ವರ್ಗದ ಜನತೆ ಮೇಲಿನ ದೌರ್ಜನ್ಯ ತಪ್ಪಿಸುವ ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶಕ್ಕೆ ಬುಧವಾರ ರಾಜ್ಯಪಾಲರ ಅಂಕಿತ ಬಿದ್ದಿದೆ. ಈ ಬೆಳವಣಿಗೆ ಬೆನ್ನಲ್ಲೇ ಸರ್ಕಾರ ರಾಜ್ಯಪತ್ರದಲ್ಲೂ ಪ್ರಕಟಿಸಿದೆ. ಇದರೊಂದಿಗೆ ಬಲವಂತದ ಸಾಲ ವಸೂಲಿ ದಂಧೆ ನಿಲ್ಲಿಸಲು ರಾಜ್ಯ ಸರ್ಕಾರಕ್ಕೆ ಬಲಿಷ್ಠ ಕಾನೂನಾತ್ಮಕ ಅಸ್ತ್ರ ಸಿಕ್ಕಿದಂತಾಗಿದೆ. ಸುಗ್ರೀವಾಜ್ಞೆಗೆ ಅಂಕಿತ ಹಾಕುವ ಜತೆಯಲ್ಲೇ ರಾಜ್ಯಪಾಲರು ಸರ್ಕಾರಕ್ಕೆ ಮೂರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ಕುರಿತು ರ್ಚಚಿಸಬೇಕೆಂಬ ಸಲಹೆ ನೀಡಿದ್ದಾರೆ.
ಸುಗ್ರೀವಾಜ್ಞೆಯಲ್ಲೇನಿದೆ?: ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಏಜೆನ್ಸಿ, ಸಂಸ್ಥೆಗಳು, ಲೇವಾದೇವಿದಾರ ನೀಡುವ ದುಬಾರಿ ಬಡ್ಡಿ ದರಗಳ ಅನುಚಿತ ತೊಂದರೆ ಮತ್ತು ಬಲವಂತದ ವಸೂಲಾತಿ ವಿಧಾನಗಳಿಂದ ಆರ್ಥಿಕವಾಗಿ ದುರ್ಬಲವಾಗುವ ಗುಂಪುಗಳು, ವ್ಯಕ್ತಿಗಳು ವಿಶೇಷವಾಗಿ ರೈತರು, ಮಹಿಳೆಯರು, ಮಹಿಳಾ ಸ್ವಸಹಾಯ ಗುಂಪುಗಳನ್ನು ರಕ್ಷಿಸಲು ಮತ್ತು ಮುಕ್ತಗೊಳಿಸಲು ಈ ಸುಗ್ರೀವಾಜ್ಞೆ ತರಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆರ್ಬಿಐನೊಂದಿಗೆ ನೋಂದಾಯಿಸಲಾದ ಯಾವುದೇ ಬ್ಯಾಂಕಿಂಗ್ ಅಥವಾ ಬ್ಯಾಂಕಿಂಗೇತರ ಕಂಪನಿಗೆ ಸುಗ್ರೀವಾಜ್ಞೆ ಅನ್ವಯವಾಗುವುದಿಲ್ಲ.
ಸಾಲಗಾರನಿಗೆ ಪರಿಹಾರ: ಲೈಸೆನ್ಸ್ ರಹಿತ ಮತ್ತು ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಅಥವಾ ಸಾಲ ನೀಡಿಕೆ ಸಂಸ್ಥೆ, ಲೇವಾದೇವಿದಾರರು ನೋಂದಾಯಿತವಲ್ಲದಿದ್ದರೆ, ಲೈಸೆನ್ಸ್ ರಹಿತವಾಗಿದ್ದರೆ, ಸಾಲಗಾರನು ಪಾವತಿಸಬೇಕಾದ ಯಾವುದಾದರೂ ಬಡ್ಡಿಯ ಮೊತ್ತವಿದ್ದಲ್ಲಿ ಅದನ್ನು ಒಳಗೊಂಡಂತೆ ‘ಸಮಾಜದ ದುರ್ಬಲ ವರ್ಗದವರಿಗಾಗಿ’ ಮುಂಗಡ ನೀಡಿದ ಪ್ರತಿಯೊಂದು ಸಾಲವನ್ನು ಸಂಪೂರ್ಣ ತೀರಿಕೆಯಾಗಿದೆ ಎಂದು ಭಾವಿಸತಕ್ಕದ್ದು ಎಂದು ಸುಗ್ರೀವಾಜ್ಞೆಯಲ್ಲಿ ಸ್ಪಷ್ಟ ಪಡಿಸಲಾಗಿದೆ. ಅಲ್ಲದೆ ಯಾವುದಾದರೂ ಬಡ್ಡಿಯಿದ್ದಲ್ಲಿ ಅದನ್ನೂ ಒಳಗೊಂಡಂತೆ ಅಂತಹ ಸಾಲದ ಯಾವುದೇ ಮೊತ್ತದ ವಸೂಲಾತಿಗಾಗಿ ಸಾಲಗಾರನ ವಿರುದ್ಧ ಯಾವುದೇ ದಾವೆ ಅಥವಾ ವ್ಯವಹರಣೆಯನ್ನು ಯಾವುದೇ ನ್ಯಾಯಾಲಯ ಪುರಸ್ಕರಿಸುವಂತಿಲ್ಲ ಎಂದೂ ಹೇಳಲಾಗಿದೆ.
ದಂಡನೆ ಏನು?: ಮೈಕ್ರೋ ಫೈನಾನ್ಸ್ ಸಂಸ್ಥೆ ಅಥವಾ ಸಾಲ ನೀಡಿಕೆ ಏಜೆನ್ಸಿ, ಲೇವಾದೇವಿದಾರರು ಸಾಲಗಾರರಿಂದ ಹಣ ವಸೂಲಾತಿಗಾಗಿ ಸ್ವತಃ ಅಥವಾ ಅದರ ಏಜೆಂಟರ ಮೂಲಕವಾಗಲಿ ಯಾವುದೇ ಇತರ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ. ಒಂದೊಮ್ಮೆ ಬಲವಂತ ಮಾಡಿದರೆ ನೋಂದಣಿ ಅಮಾನತು ಪಡಿಸುವ, ರದ್ದುಪಡಿಸುವ ಅಧಿಕಾರ ಪ್ರಾಧಿಕಾರಕ್ಕಿದೆ.
ಈ ಸುಗ್ರೀವಾಜ್ಞೆ ಉಲ್ಲಂಘಿಸುವ ಯಾವುದೇ ವ್ಯಕ್ತಿಯನ್ನು ವಿಚಾರಣೆಗೊಳಪಡತಕ್ಕದ್ದು ಮತ್ತು ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟರ್ ಮೂಲಕ ಹತ್ತು ವರ್ಷಗಳಿಗೆ ವಿಸ್ತರಿಸಬಹುದಾದ ಅವಧಿಯ ಕಾರಾಗಾರವಾಸದಿಂದ ಹಾಗೂ ಐದು ಲಕ್ಷ ರೂ. ವರೆಗೆ ವಿಸ್ತರಿಸಬಹುದಾದ ಜುಲ್ಮಾನೆಯಿಂದ ದಂಡಿತನಾಗಬೇಕಾಗುತ್ತದೆ. ಅಲ್ಲದೆ ಅಪರಾಧಗಳು ಕಾಗ್ನಿಜಬಲ್ (ಸಂಜ್ಞೇಯ) ಆಗಿದ್ದು ಜಾಮೀನು ರಹಿತವಾಗಿರುತ್ತದೆ.
ನೋಂದಣಿ ಇಲ್ಲದಿದ್ರೆ?: ಸುಗ್ರೀವಾಜ್ಞೆ ಅನ್ವಯ ಇನ್ಮುಂದೆ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಮಾಡಿಕೊಳ್ಳದೆ ಸಾಲ ನೀಡಿಕೆ ಏಜೆನ್ಸಿಗಳು, ಲೇವಾದೇವಿದಾರರು ನೊಂದಣಿ ಪ್ರಾಧಿಕಾರದಿಂದ ಸಾಲ ಮಂಜೂರು ಮಾಡುವಂತಿಲ್ಲ, ಸಾಲ ವಸೂಲಿಯನ್ನೂ ಮಾಡುವಂತಿಲ್ಲ.
ಗವರ್ನರ್ ಸಲಹೆ
- ಸುಗ್ರೀವಾಜ್ಞೆ ಅಂಶಗಳ ದುರ್ಬಳಕೆ ಅಥವಾ ತಪು್ಪ ವ್ಯಾಖ್ಯಾನ ಆರ್ಬಿಐನಿಂದ ಪರವಾನಗಿ ಪಡೆದ ಹಣಕಾಸು ಸಂಸ್ಥೆಗಳಿಗೆ ಕಿರುಕುಳ ಎದುರಾಗುವ ಸಾಧ್ಯತೆ ತಿಳಿದಿರಲಿ
- ನಿಯಮಗಳು, ಮಾರ್ಗಸೂಚಿ ಪ್ರಕಾರ ಸಾಲ ನೀಡಿ, ಬಡ್ಡಿ ವಿಧಿಸುವ ಹಾಗೂ ವಸೂಲಿ ಮಾಡುವ ಪ್ರಾಮಾಣಿಕ ಮೈಕ್ರೋ ಫೈನಾನ್ಸ್, ಎನ್ಬಿಎಫ್ಸಿಗಳ ಮೇಲೆ ಅಡ್ಡಪರಿಣಾಮದಿಂದ ಗ್ರಾಮೀಣ ಹಣಕಾಸು ಹರಿವು ಏರುಪೇರಾ ಗುವುದನ್ನು ಗಮನಿಸಿ
- ಸಾಲ ಕೊಟ್ಟವರು ಕೋರ್ಟ್ಗೆ ಮೊರೆ ಹೋಗಬಾರದೆಂದು ಹೇಳಲಾಗಿದೆ. ಸಂವಿಧಾನ ಬದ್ಧ ಹಕ್ಕಿಗೆ ಧಕ್ಕೆಯಾಗುತ್ತದೆ ಎಂಬ ಬಗ್ಗೆ ಪರಿಶೀಲಿಸಿ
ಜನರಿಗೆ ಕಿರುಕುಳ ನೀಡದೆ ನಿಯಮಾನುಸಾರ ಬಡ್ಡಿ ಪಡೆಯುವವರಿಗೆ, ಬ್ಯಾಂಕ್ಗಳಿಗೆ ಈ ಸುಗ್ರೀವಾಜ್ಞೆಯಿಂದ ತೊಂದರೆ ಆಗುವುದಿಲ್ಲ. ಕಾನೂನಾತ್ಮಕ ವ್ಯವಹಾರಕ್ಕೆ ಸ್ವಾಗತ ಇದ್ದೇ ಇದೆ. ದೈಹಿಕ ಹಿಂಸೆ ಮಾಡುವ ಅಕ್ರಮ ಕೃತ್ಯವನ್ನು ನಿಯಂತ್ರಿಸಲು ಮತ್ತು ಅಕ್ರಮ ಲೇವಾದೇವಿ ವ್ಯವಹಾರ ನಿಯಂತ್ರಿಸಲು ಈ ಸುಗ್ರೀವಾಜ್ಞೆ ಮೂಲಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ.
| ಎಚ್.ಕೆ. ಪಾಟೀಲ ಕಾನೂನು ಸಚಿವ