ಟೀಸರ್​ಗೆ 'ದಿಲ್ ಖುಷ್'!; ನವೀರಾದ ಪ್ರೇಮಕಥೆಯ ಹಾದಿ ಹೀಗಿದೆ

Untitled design - 2023-11-05T151402.016
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇದೀಗ ಸಾಲು ಸಾಲು ಹೊಸ ಸಿನಿಮಾಗಳು ತೆರೆ ಮೇಲೆ ಬರಲು ಸಿದ್ಧವಾಗುತ್ತಿದೆ. ಈ ಮಧ್ಯೆ ನವೀರಾದ ಪ್ರೇಮಕಥೆಯೊಂದನ್ನು 'ದಿಲ್​ ಖುಷ್'​ ಆಗಿ ಹೇಳಲು ಇಲ್ಲೊಂದು ತಂಡ ಸಕಲ ತಯಾರಿಗಳನ್ನು ಮಾಡಿಕೊಂಡಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್ ಅನ್ನು ನಟ, ನಿರ್ದೇಶಕ ಡಾರ್ಲಿಂಗ್ ಕೃಷ್ಣ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ರೊಮ್ಯಾಂಟಿಕ್ ಕಾಮಿಡಿ ಕಥಾಹಂದರವುಳ್ಳ 'ದಿಲ್ ಖುಷ್' ಸಿನಿಮಾವನ್ನು ಪ್ರಮೋದ್ ಜಯ ನಿರ್ದೇಶಿಸಿದ್ದು, ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಬೆಂಗಳೂರು, ಕೊಡಗು ಜಿಲ್ಲೆಯ ಸೋಮವಾರಪೇಟೆ,‌ ಶನಿವಾರಸಂತೆ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

"ದಿಲ್ ಖುಷ್" ಎಂದರೆ ನಾಯಕ-ನಾಯಕಿ ಹೆಸರು. ದಿಲ್ಮಯ ನಾಯಕಿಯ ಹೆಸರಾದರೆ, ಕುಷಾಲ್ ನಾಯಕನ ಹೆಸರು. ಮನೆ ಮಂದಿಯೆಲ್ಲಾ ಕುಳಿತು ನೋಡುವ ಒಂದೊಳ್ಳೆ ಕೌಟುಂಬಿಕ ಚಿತ್ರವಿದು ಎನ್ನುತ್ತಾರೆ ನಿರ್ದೇಶಕ ಪ್ರಮೋದ್ ಜಯ.

ರಂಜಿತ್ ಈ ಚಿತ್ರದ ನಾಯಕನಾಗಿ, ಸ್ಪಂದನ ಸೋಮಣ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ಅರುಣಾ ಬಾಲರಾಜ್, ರಘು ರಾಮನಕೊಪ್ಪ, ರವಿ ಭಟ್, ಧರ್ಮಣ್ಣ ಕಡೂರು, ಸೂರ್ಯ ಪ್ರವೀಣ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭಾ ಶೇಖರ್ ನಿರ್ಮಿಸಿರುವ ಈ ಚಿತ್ರ ಶೀಘ್ರವೇ ತೆರೆಗೆ ಬರಲಿದೆ. ಸಿನಿಮಾಗೆ ಪ್ರಸಾದ್ ಕೆ. ಶೆಟ್ಟಿ ಐದು ಹಾಡುಗಳನ್ನು ನೀಡಿದ್ದು, ನಿವಾಸ್ ನಾರಾಯಣ್ ಅವರ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net