ದಶಕದ ಬಳಿಕ ಕೋಡಿ ಬಿದ್ದ ಮೂಡಲ್​ ಕುಣಿಗಲ್​ ಕೆರೆ: ಐಭೋಗ ನೋಡೋಕ್​ ಬನ್ನಿ...

kunigal kere
Published on

ಕುಣಿಗಲ್​: ದಶಕದ ಬಳಿಕ ಮೂಡಲ್​ ಕುಣಿಗಲ್​ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಈ ಐಭೋಗ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ.

ಕುಣಿಗಲ್​ ಎಂದಾಕ್ಷಣ 'ಮೂಡಲ್​ ಕುಣಿಗಲ್​ ಕೆರೆ' ನೆನಪಾಗುತ್ತೆ. ಕುಣಿಗಲ್​ ದೊಡ್ಡಕೆರೆ ಕುರಿತ ಜಾನಪದ ಗೀತೆಯೂ ಜನಜನಿತವಾಗಿದೆ. 'ನನ್ನ ಪ್ರೀತಿಯ ಹುಡುಗಿ' ಸಿನಿಮಾದಲ್ಲೂ ಈ ಗೀತೆಯನ್ನ ಬಳಸಿಕೊಳ್ಳಲಾಗಿದೆ. ಪುರಾತನ ಕುಣಿಗಲ್​ ದೊಡ್ಡಕೆರೆ ತುಮಕೂರು ಜಿಲ್ಲೆ ಕುಣಿಗಲ್​ ತಾಲೂಕಿನ ಜೀವನಾಡಿಯಾಗಿದ್ದು, ಕೆರೆ ಕೋಡಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಜನತೆ ಖುಷಿಯಿಂದಲೇ ಬಂದು ನೀರಾಟ ಆಡುತ್ತಾ, ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ.

12 ವರ್ಷದ ಬಳಿಕ ಕುಣಿಗಲ್​ ಕೆರೆ ಕೋಡಿ ಬಿದ್ದಿದು, ಕೃಷಿ ಚಟುವಟಿಕೆಗಳಿಗೆ ಮರುಜೀವ ಬಂದಂತಾಗಿದೆ. ಕೆರೆಯ ಮಡಿಲಲ್ಲೇ ಕೃಷಿ ಜಮೀನಿದ್ದರೂ ನೀರಿನ ಕೊರತೆಯಿಂದಾಗಿ ಅದೆಷ್ಟೋ ಮಂದಿ ಪಾಳು ಬಿಟ್ಟಿದ್ದಾರೆ. ಭತ್ತ ಬೆಳೆದು ದಶಕಗಳೇ ಕಳೆದಿವೆ. ಇನ್ನಾದರೂ ನೀರು ಕೊಡ್ತಾರೇನೋ ಎಂಬ ಆಶಾಭಾವದಲ್ಲಿ ರೈತರು ಕಾಯುತ್ತಿದ್ದಾರೆ.

ಕುಣಿಗಲ್​ನ ದೊಡ್ಡಕೆರೆ ಸೋಮೇಶ್ವರ ದೇವಾಲಯದ ಬಳಿ ಜಾಕ್​ವೆಲ್​ ನಿರ್ಮಾಣ ಮಾಡಿ, ನೀರು ಶುದ್ಧೀಕರಣ ಘಟಕದಲ್ಲಿ ಸಂಸ್ಕರಿಸಿ ಪಟ್ಟಣದ 23 ವಾರ್ಡ್​ಗಳ 45 ಸಾವಿರ ಜನರಿಗೆ ಪೂರೈಕೆ ಮಾಡಲಾಗುತ್ತಿದೆ. ಕೆರೆಕೋಡಿ ಪಟ್ಟಣದ ಜನತೆಗೆ ಅನುಕೂಲವಾಗಲಿದೆ.

ಬಿ.ಬಿ.ರಾಮಸ್ವಾಮಿಗೌಡ ಅವರು ಶಾಸಕರಾಗಿದ್ದಾಗ ಮೂಡಲ್​ ಕುಣಿಗಲ್​ ಕೆರೆ ಕೋಡಿಯಾಗಿತ್ತು. ಆ ವೇಳೆ ಸ್ನೇಹ ಮಿತ್ರ ಮಂಡಳಿಯು ವಿದ್ಯುತ್​ ದೀಪಾಲಂಕಾರ ಮಾಡಿ ಕೆರೆಯ ಸೊಬಗನ್ನೂ ಇಮ್ಮಡಿಗೊಳಿಸಿತ್ತು. ಈ ಬಾರಿಯೂ ಕೆರೆ ಕೋಡಿಗೆ ವಿದ್ಯುತ್​ ದೀಪಾಲಂಕಾರ ಮಾಡಿಸಬೇಕು ಎಂಬ ಜನರ ಆಶಯಕ್ಕೆ ಕ್ಷೇತ್ರದ ಶಾಸಕರು ಸ್ಪಂದಿಸುತ್ತಾರೇಯೇ ಎಂಬುದನ್ನ ಕಾದು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net