

ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯ ಪುಷ್ಪಾರ್ಚನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು.
ಚಿನ್ನದ ಅಂಬಾರಿ ಮೇಲೆ ಕೂರಿಸುವ ತಾಯಿ ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಿದ ನಂತರ ಜಂಬೂಸವಾರಿ ಮೆರವಣಿಗೆಗೆ ಚಾಲನೆ ದೊರೆಯುತ್ತದೆ. ಈ ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಆಗಮಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಈ ಕುರಿತು ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ದಸರಾ ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಲಿದ್ದಾರೆ. ಆದರೆ, ಅವರು ಅರಮನೆಗೆ ಭೇಟಿ ನೀಡುವುದು ಖಚಿತವಾಗಿಲ್ಲ. ಈ ಬಗ್ಗೆ ಮಾಹಿತಿ ಕೇಳಲಾಗಿದೆ. ರಾಷ್ಟ್ರಪತಿ ಅವರಿಂದ ಅರಮನೆ ಭೇಟಿಗೆ ಇನ್ನೂ ಅಧಿಕೃತ ಒಪ್ಪಿಗೆ ದೊರೆತಿಲ್ಲ ಎಂದು ಸ್ಪಷ್ಟ ಪಡಿಸಿದರು.