PSI ನೇಮಕಾತಿ ಅಕ್ರಮ: ಆಸ್ತಿ ಜಪ್ತಿಗೆ ಮುಂದಾಗುತ್ತಿದ್ದಂತೆ ಮಧ್ಯವರ್ತಿಗಳಿಬ್ಬರು ಕೋರ್ಟ್​ಗೆ ಶರಣು!

PSI
Published on

ಬೆಂಗಳೂರು: ಪಿಎಸ್​​ಐ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮ‌ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಧ್ಯವರ್ತಿಗಳ ಪೈಕಿ ಇಬ್ಬರು ಕೋರ್ಟ್​ಗೆ ಶರಣಾಗಿದ್ದಾರೆ. ಆರೋಪಿಗಳಾದ ಸಿದ್ದರಾಜು, ಬೋರೇಗೌಡನನ್ನು ಬಂಧಿಸಲಾಗಿದೆ.

ಪಿಎಸ್​ಐ ಹಗರಣದ ಪ್ರಮುಖ ಆರೋಪಿಗಳಾದ ಸಿದ್ದರಾಜು, ಬೋರೇಗೌಡ, ಬ್ಯಾಡರಹಳ್ಳಿ ಪೊಲೀಸ್​ ಠಾಣೆ ಪಿಎಸ್​ಐ ನವೀನ್ ಸೇರಿದಂತೆ ಅನೇಕರ ಬಗ್ಗೆ ಐದಾರು ತಿಂಗಳು ಕಳೆದರೂ ಸುಳಿವೇ ಸಿಕ್ಕಿರಲಿಲ್ಲ. ಹಾಗಾಗಿ ಕೋರ್ಟ್​ನ ಸೂಚನೆಯಂತೆ ಆರೋಪಿಗಳ ಪತ್ತೆಗೆ ಸಿಐಡಿ ಅಧಿಕಾರಿಗಳು ತಮಟೆಯ ಮೊರೆ ಹೋಗಿದ್ದರು. ಇತ್ತೀಚಿಗೆ ಸಿದ್ದರಾಜುವಿನ ಲಗ್ಗೆರೆ ನಿವಾಸದ ಬಳಿ ತಮಟೆ ಬಾರಿಸಿ... ನೋಟಿಸ್ ಅಂಟಿಸಿದ್ದ ಸಿಐಡಿ ಅಧಿಕಾರಿಗಳು ಆರೋಪಿಯ ಕುರಿತು ಮಾಹಿತಿ ನೀಡುವಂತೆ ಪ್ರಚಾರ ಮಾಡಿದ್ದರು.

ಸಿದ್ದರಾಜಿವಿನ ಲಗ್ಗೆರೆ ನಿವಾಸದಲ್ಲಿ ಟಿವಿ, ಫ್ರಿಡ್ಜ್​, ಸೋಫಾ, ಕಾರು ಹಾಗೂ ಬೈಕ್ ಸೇರಿ ಚರಾಸ್ತಿ ಜಪ್ತಿಗೂ ಮುಂದಾಗಿದ್ದರು. ಇದರ ಬೆನ್ನಲ್ಲೇ ಅಂದರೆ ನಿನ್ನೆ(ಸೆ.16) ಸಿದ್ದರಾಜು ಕೋರ್ಟ್​ಗೆ ನೇರವಾಗಿ ಬಂದು ಶರಣಾಗಿದ್ದಾನೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಸಿದ್ದರಾಜು, ಪಿಎಸ್​​ಐ ಆಗಿ ಆಯ್ಕೆಯಾಗಿದ್ದ ಗಜೇಂದ್ರ, ಮನೋಜ್​​ಗೆ ಮಧ್ಯವರ್ತಿಯಾಗಿದ್ದ ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದ.

ಅತ್ತ ಮತ್ತೊಬ್ಬ ಆರೋಪಿ ಬೋರೇಗೌಡ ಎಂಬಾತನೂ ನಿನ್ನೆ ಕೋರ್ಟ್​ಗೆ ಶರಣಾಗಿದ್ದಾನೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈತ ತೀರ್ಥಯಾತ್ರೆಗೆ ಹೋಗಿ ತಲೆಮರೆಸಿಕೊಂಡಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net