ಸದ್ಯದಲ್ಲೇ ಗಡ್ಡಧಾರಿ ವ್ಯಕ್ತಿ ಸಿಎಂ ಆಗ್ತಾರೆ! ಮೈಲಾರ ಭವಿಷ್ಯವಾಣಿ ಬೆನ್ನಲ್ಲೇ ಸ್ಫೋಟಕ ಹೇಳಿಕೆ ಕೊಟ್ಟ ಸಿ.ಟಿ. ರವಿ

RAVI CT
Published on

ಬೆಂಗಳೂರು: 'ಇನ್ನು ಆರೇಳು ತಿಂಗಳಲ್ಲಿ ಗಡ್ಡಧಾರಿ ವ್ಯಕ್ತಿಯೊಬ್ಬರು ಕರ್ನಾಟಕ ರಾಜ್ಯದ ಗದ್ದುಗೆ ಏರಲಿದ್ದಾರೆ' ಎಂದು ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಭವಿಷ್ಯವಾಣಿ ನುಡಿದಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಮೈಲಾರದ ಭವಿಷ್ಯವಾಣಿಯಂತೆ ಈಗಿರುವ ಸರ್ಕಾರದಲ್ಲಿ ಮೂವರು ಸಿಎಂ ಆಗಿ ಮುಕ್ತಾಯ ಆಗುತ್ತೆ. ಇನ್ನು ಕೆಲವೇ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಬದಲಾವಣೆ ಆಗುವುದು ಖಚಿತ. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ಅವರು 6-7 ತಿಂಗಳು ಮಾತ್ರ ರಾಜ್ಯಭಾರ ಮಾಡ್ತಾರೆ. 2022ರ ಮಾರ್ಚ್​ನಲ್ಲಿ ಗಡ್ಡಧಾರಿ ವ್ಯಕ್ತಿ ಸಿಎಂ ಆಗ್ತಾರೆ ಎಂದು ಮೈಲಾರಲಿಂಗೇಶ್ವರನ ಭವಿಷ್ಯವಾಣಿ ಹೇಳಿದೆ. ಈ ಸುದ್ದಿ ಹರಡುತ್ತಿದ್ದಂತೆ ಸಿ.ಟಿ. ರವಿ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.

ಚಿಕ್ಕಮಗಳೂರಿನ ಮಲ್ಲೇನಹಳ್ಳಿಯಲ್ಲಿ ಮಾತನಾಡಿದ ಸಿ.ಟಿ.ರವಿ, 'ಸಿಎಂ ಆಗೋಕೆ ಯೋಗಬೇಕು. ಅದು ಬೊಮ್ಮಾಯಿ ಅವರಿಗೆ ಇದೆ. ನಾನು ಸಿಎಂ ಆಗಲು ಗಡ್ಡ ಬಿಟ್ಟಿಲ್ಲ. ಗಡ್ಡ ಬಿಟ್ಟಾಕ್ಷಣ ಸಿಎಂ ಆಗಲ್ಲ' ಎಂದು ಸಿ.ಟಿ.ರವಿ ಹೇಳಿದ್ದಾರೆ. 'ನನಗೆ ಕಾಲೇಜು ದಿನಗಳಿಂದಲೂ ಗಡ್ಡ ಬಿಡುವ, ಹಣೆಗೆ ಕುಂಕುಮ ಇಡುವ, ಕಿವಿಗೆ ಟಿಕ್ಕಿ ಹಾಕುವ ಹವ್ಯಾಸ ಇದೆ. ಗಡ್ಡ ಬಿಟ್ಟಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿ. ನನ್ನನ್ನು ನೋಡಿದಾಕ್ಷಣ ಸಿಟಿ ರವಿ ಎಂಬುದು ಗೊತ್ತಾಗಲಿ ಎಂದೇ ನಾನು ಹೀಗಿರುವೆ' ಎಂದ ಸಿ.ಟಿ.ರವಿ, 'ಸಿಎಂ ಆಗುವ ಆಸೆಯಿಂದ ಕೆಲವರು ಗಡ್ಡ ಬಿಟ್ಟಿರಬಹುದು' ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net