ಮದುವೆಯಾದ ಸ್ನೇಹಿತ ಪಾರ್ಟಿಗೆ ಕಡಿಮೆ ಹೆಂಡ ತಂದ! ನೀ ಬದುಕಲು ಯೋಗ್ಯನಲ್ಲ ಎಂದು ಕೊಂದೇ ಬಿಟ್ಟರು ಸ್ನೇಹಿತರು

drinks
Published on

ಲಖನೌ: ಮದುವೆಯೆಂದರೆ ಮೋಜು ಮಸ್ತಿ ಸರ್ವೇ ಸಾಮಾನ್ಯ. ಕೆಲವು ಸ್ಥಳಗಳಲ್ಲಂತೂ ಮದ್ಯದ ಪಾರ್ಟಿಯೂ ಸಾಮಾನ್ಯವೇ. ಆದರೆ ಅದೇ ಮದ್ಯದ ಪಾರ್ಟಿಗಾಗಿ ವರನನ್ನೇ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಪಾಲಿಮುಕಿಮ್​ಪುರ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಮದುವೆಯಾದ ಸಂತೋಷದಲ್ಲಿದ್ದ ಬಬ್ಲು (28) ತನ್ನ ಸ್ನೇಹಿತರಿಗೆ ಪಾರ್ಟಿ ಕೊಡಿಸಿದ್ದಾನೆ. ಸೋಮವಾರ ರಾತ್ರಿ ಪಾರ್ಟಿ ನಡೆಸಲಾಗಿದೆ. ಆದರೆ ಹೆಚ್ಚಿನ ಪ್ರಮಾಣದ ಮದ್ಯವನ್ನು ತರದೆ ಕಡಿಮೆ ಮದ್ಯದಲ್ಲೇ ಪಾರ್ಟಿ ಮುಗಿಸಲು ಬಬ್ಲು ನೋಡಿದ್ದಾನೆ. ನಮಗೆ ಇನ್ನೂ ಡ್ರಿಂಕ್ಸ್​ ಬೇಕು, ತೆಗೆದುಕೊಂಡು ಬಾ ಎಂದು ಆತನ ಸ್ನೇಹಿತರು ಕೇಳಿದ್ದಾರೆ. ಆದರೆ ಅದಾಗಲೇ ಸ್ನೇಹಿತರು ನಿಯಂತ್ರಣ ತಪ್ಪಿದ್ದರಿಂದಾಗಿ ಬಬ್ಲು ಮದ್ಯ ತರಲು ನಿರಾಕರಿಸಿದ್ದಾನೆ.

ಇದೇ ಕಾರಣದಿಂದಾಗಿ ಸ್ನೇಹಿತರ ನಡುವೆ ಜಗಳವಾಗಿದೆ. ಸಿಟ್ಟಿನಲ್ಲಿ ಬಬ್ಲುವಿನ ಮೇಲೆ ಹಲ್ಲೆ ನಡೆಸಲಾಗಿದೆ. ಚಾಕುವಿನಿಂದ ಇರಿಯಲಾಗಿದೆ. ಗಾಯಗೊಂಡಿದ್ದ ಬಬ್ಲುವನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಈ ಕುರಿತಾಗಿ ಪೊಲೀಸ್​ ಪ್ರಕರಣ ದಾಖಲಾಗಿದೆ. ರಾಮ್​ ಖಿಲಾಡಿ ಹೆಸರಿನ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಉಳಿದ ಐವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net