| ಬೆಂಕಿ ಬಸಣ್ಣ, ನ್ಯೂಯಾರ್ಕ್
Deepavali celebration in Albany : ಕಳೆದ ಶನಿವಾರದಂದು (ಅ.19) ಇತಿಹಾಸದಲ್ಲಿ ಮೊದಲ ಬಾರಿಗೆ ನ್ಯೂಯಾರ್ಕ್ ರಾಜ್ಯ ಸರ್ಕಾರವು ರಾಜಧಾನಿ ಆಲ್ಬನಿಯಲ್ಲಿ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇದರಲ್ಲಿ ಸಾವಿರಾರು ಜನರು ಅತಿ ಉತ್ಸಾಹದಿಂದ ಭಾಗವಹಿಸಿದ್ದರು. ಭಾರತ ದೇಶದ ಹಿಂದುಗಳು ಮಾತ್ರವಲ್ಲದೆ, ಗಯಾನ, ಬಾಂಗ್ಲಾ, ನೇಪಾಳ ಹೀಗೆ ವಿವಿಧ ದೇಶಗಳ ಹಿಂದುಗಳು ಸಹಿತ ಇದರಲ್ಲಿ ಭಾಗವಹಿಸಿದ್ದರು. ಜೊತೆಗೆ ಸ್ಥಳೀಯ ಅಮೆರಿಕನ್ನರೂ ಭಾಗವಹಿಸಿದ್ದರು.
ನ್ಯೂಯಾರ್ಕ್ ರಾಜ್ಯದ ಗವರ್ನರ್ ಕ್ಯಾತಿ ಹೋಕಲ್ ಇನ್ನು ಮುಂದೆ ಪ್ರತಿ ವರ್ಷ ದೀಪಾವಳಿ ಮತ್ತು ಹೋಳಿ ಹಬ್ಬಗಳನ್ನು ನ್ಯೂಯಾರ್ಕ್ ರಾಜ್ಯ ಸರ್ಕಾರ ಅಧಿಕೃತವಾಗಿ ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಿದೆ ಎಂದು ಘೋಷಿಸಿದ್ದಾರೆ. ಇಷ್ಟು ವರ್ಷ ಅಮೆರಿಕದಲ್ಲಿ ಹಿಂದು ದೇವಸ್ಥಾನಗಳಿಂದಲೋ ಅಥವಾ ಭಾರತದ ಸಂಘಗಳಿಂದಲೋ ಪ್ರೈವೇಟ್ ಆಗಿ ದೀಪಾವಳಿ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ, ಇದೇ ಮೊದಲ ಬಾರಿಗೆ ನ್ಯೂಯಾರ್ಕ್ ಸರಕಾರವು ಇದನ್ನು ಸಾರ್ವಜನಿಕ ಕಾರ್ಯಕ್ರಮವಾಗಿ ಅಂದರೆ ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿದೆ. ಇದು ಅಮೆರಿಕದಲ್ಲಿರುವ ಭಾರತೀಯರಿಗೆ ಸಂದ ಬಹು ದೊಡ್ಡ ವಿಜಯವಾಗಿದೆ. ಅನೇಕ ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಹೋದ ವರ್ಷ 2023ರಲ್ಲಿ ನ್ಯೂಯಾರ್ಕ್ ಸಿಟಿಯ ಸರ್ಕಾರಿ ಶಾಲೆಗಳಲ್ಲಿ ದೀಪಾವಳಿ ಹಬ್ಬವನ್ನು ರಜಾ ದಿನವನ್ನಾಗಿ ಘೋಷಿಸುವ ಶಾಸನಕ್ಕೆ ಗವರ್ನರ್ ಕ್ಯಾತಿ ಹೋಕಲ್ ಸಹಿ ಹಾಕಿದ್ದರು. ಈ ವರ್ಷ ನ್ಯೂಯಾರ್ಕ್ ರಾಜ್ಯ ಸರ್ಕಾರವು ದೀಪಾವಳಿ ಹಬ್ಬವನ್ನು ಆಚರಿಸುತ್ತಿದೆ.
ದೀಪಾವಳಿ ಕಾರ್ಯಕ್ರಮವು ಎಂಪೈರ್ ಸ್ಟೇಟ್ ಪ್ಲಾಜದ ಕನ್ವೆನ್ಷನ್ ಸೆಂಟರ್ನಲ್ಲಿ ಡೊಳ್ಳು ಕುಣಿತ, ಮೆರವಣಿಗೆ ಮತ್ತು ಪೂಜೆಯೊಂದಿಗೆ ಪ್ರಾರಂಭವಾಯಿತು. ಇದಾದ ನಂತರ ಭಾರತ ದೇಶದ ವಿವಿಧ ರಾಜ್ಯಗಳ ಸಂಘ ಸಂಸ್ಥೆಗಳಿಂದ ದೀಪಾವಳಿ ಆಚರಣೆಯ ಕುರಿತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಲ್ಪನಿ ಕನ್ನಡ ಸಂಘವು ಒಂದು ವೈವಿಧ್ಯಮಯ ಕಾರ್ಯಕ್ರಮವನ್ನು ತುಂಬಾ ಸೊಗಸಾಗಿ ನಡೆಸಿಕೊಟ್ಟಿತು. ಇದರಲ್ಲಿ ಕನ್ನಡ ಕಲಿ ಶಾಲೆಯ ಮಕ್ಕಳು ದೀಪಾವಳಿ ಮಹತ್ವ ತಿಳಿಸುವ ಪುರಾಣ ಕಥೆಗಳ ಚಿಕ್ಕ ನಾಟಕವನ್ನು ಮತ್ತು ಕನ್ನಡ ಮಹಿಳೆಯರು ಕಂಸಾಳೆ ನೃತ್ಯವನ್ನು ಹಾಗೂ ಎಲ್ಲರೂ ಒಟ್ಟಾಗಿ ಫ್ಯಾಶನ್ ಶೋ ಅನ್ನು ಮನೋರಂಜಕವಾಗಿ ನಡೆಸಿಕೊಟ್ಟರು.
ಇದನ್ನೂ ಓದಿ: Protect Your Eyes : ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿ ಹೊಗೆಯಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಿ!
ಈ ಕಾರ್ಯಕ್ರಮದಲ್ಲಿ ಕನ್ನಡ ಕೂಟದ ಸುಮಾರು 50 ಜನ ಭಾಗವಹಿಸಿದ್ದರು. ಜೊತೆಗೆ ತಮಿಳು, ತೆಲುಗು, ಗುಜರಾತಿ, ರಾಜಸ್ತಾನಿ, ಮರಾಠಿ. ಸಿಖ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಆಲ್ಬನಿ ಧೋಲ್ ತಾಷಾ ಪಟಾಕ್ ತಂಡ ನಡೆಸಿಕೊಟ್ಟ ಲೆಜಿಮು ಮತ್ತು ಡೊಳ್ಳು ಕುಣಿತ ಪ್ರಮುಖ ಆಕರ್ಷಣೆಯಾಗಿತ್ತು.
OGS ಕಮಿಷನರ್ ಜನೆಟ್ ಮೊಯ್ ಮುಖ್ಯ ಅತಿಥಿಯಾಗಿ ಪಕ್ಕದಲ್ಲಿರುವ ಕೊಳದಲ್ಲಿ ರಾತ್ರಿ ಎಂಟು ಗಂಟೆಗೆ ಗಂಗಾ ಪೂಜೆಯನ್ನು ನೆರವೇರಿಸಿದರು. ನೂರಾರು ಜನರು ಗಂಗಾ ಪೂಜೆಯನ್ನು ಮಾಡಿ ಕೊಳದ ನೀರಿನಲ್ಲಿ ದೀಪಗಳನ್ನು ತೇಲಿ ಬಿಟ್ಟರು. ನಂತರ ರಾತ್ರಿಯ ಬಾನಂಗಳದಲ್ಲಿ ಮಿನಿಗಿದ “ಫೈಯರ್ ವರ್ಕ್” ಸಾವಿರಾರು ಜನರನ್ನು ಆಕರ್ಷಿಸಿತು. ನ್ಯೂಯಾರ್ಕ್ ರಾಜ್ಯ ಸರ್ಕಾರದ ಆಫೀಸ್ ಆಫ್ ಜನರಲ್ ಸರ್ವಿಸಸ್ (OGS)ನ ರೋಹಿತ್ ಭಾತೇಜ ಈ ಪ್ರಪ್ರಥಮ ದೀಪಾವಳಿ ಕಾರ್ಯಕ್ರಮದ ಆಯೋಜಕರಾಗಿದ್ದರು. ಇವರಿಗೆ ಬೆಂಬಲವಾಗಿ ನಿಂತು ಸಹಾಯ ಮಾಡಿದವರು ಸ್ಥಳೀಯ ಭಾರತೀಯ ಸಂಘದ ನಾಯಕರಾದ ಬೆಂಕಿ ಬಸಣ್ಣ, ಕಲ್ಯಾಣ್ ಗುಲೆ, ವೆಂಕಟ್ ಜಸ್ತಿ ಮತ್ತು ಮನೋಜ್ ಅಜಮೇರಾ ಮುಂತಾದವರು. ಮುಂದಿನ ವರ್ಷ ಇದಕ್ಕಿಂತಲೂ ದೊಡ್ಡ ಪ್ರಮಾಣದಲ್ಲಿ ದೀಪಾವಳಿ ಹಬ್ಬವನ್ನು ನ್ಯೂಯಾರ್ಕ್ ಸರ್ಕಾರ ಆಚರಿಸಲಿದೆ.
“ವಿಶ್ವ ಕನ್ನಡ ಕೂಟಗಳ ಮಾಹಿತಿ ಕೋಶ”ಕ್ಕೆ ಸಂಪಾದಕರಾಗಿ ಬೆಂಕಿ ಬಸಣ್ಣ ನೇಮಕ