ಮಹಿಳಾ ಸಬಲೀಕರಣಕ್ಕೆ ಇದು ಉತ್ತಮ ನಿದರ್ಶನ: ನೇಪಾಳದ ಪ್ರಧಾನಿಯನ್ನು ಅಭಿನಂದಿಸಿದ ಪಿಎಂ ಮೋದಿ| Nepal

untitled-design-2025-09-13t181558008-68c567b426e8d
Published on

Nepal: ಕೆಲವು ದಿನಗಳಿಂದ ನಡೆದ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ಆಡಳಿತ ಬದಲಾವಣೆಯ ನಂತರ ನೇಪಾಳ ಮೊದಲಿನ ಸ್ಥಿತಿಗೆ ತಲುಪಿದ ನಂತರ, ಪ್ರಧಾನಿ ನರೇಂದ್ರ ಮೋದಿ ನೇಪಾಳ ರಾಷ್ಟ್ರದ ಮಧ್ಯಂತರ ಪ್ರಧಾನಿಯಾಗಿ ಆಯ್ಕೆಯಾಗಿರುವ ಸುಶೀಲ್ ಕರ್ಕಿಯವರನ್ನು ಅಭಿನಂದಿಸಿದ್ದು, ಈ ಆಯ್ಕೆ ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಶನಿವಾರ ಇಂಫಾಲ್‌ನಲ್ಲಿ ನಡೆದ ಸಭೆವೊಂದರಲ್ಲಿ ತಿಳಿಸಿದ್ದಾರೆ.

ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಕರ್ಕಿ ದೇಶದ ಮಧ್ಯಂತರ ಪ್ರಧಾನಿಯಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಅವರ ಪೂರ್ವವರ್ತಿ ಕೆ.ಪಿ. ಶರ್ಮಾ ಓಲಿ ರಾಜಿನಾಮೆ ನೀಡಿದ ನಾಲ್ಕು ದಿನಗಳ ಬಳಿಕ ಪ್ರಸ್ತುತ ಪ್ರಧಾನಿಯಾಗಿ ಕಾರ್ಯ ಅಧಿಕಾರ ಸ್ವೀಕರಿಸಿದ್ದು, ನೇಪಾಳದ ಮೊದಲ ಮಹಿಳಾ ಪ್ರಧಾನಿ ಎಂದು ಗುರುತಿಸಲಾಗಿದೆ.

ನೇಪಾಳ ಭಾರತದ ಆಪ್ತಮಿತ್ರ. ಈ ಸರ್ಕಾರದ ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀಮತಿ ಸುಶಿಲಾ ಜಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮೊದಲ ಮಹಿಳಾ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಮಹಿಳಾ ಸಬಲೀಕರಣಕ್ಕೆ ಉತ್ತಮ ಉದಾಹರಣೆಯಾಗಿದೆ. ಇನ್ನು ಕರ್ಕಿ ಅವರ ನಾಯಕತ್ವದಲ್ಲಿ ನೇಪಾಳದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡುತ್ತಾರೆ ಎಂದರು.

73 ವರ್ಷದ ನೇಪಾಳದ ನಾಯಕಿ ತಮ್ಮ ಸಮಗ್ರತೆಗೆ ಹೆಸರುವಾಸಿಯಾಗಿದ್ದಾರೆ. ಅವರು 2016 ಮತ್ತು 2017 ರ ನಡುವೆ ನ್ಯಾಯಮೂರ್ತಿಯಾಗಿದ್ದ ವೇಳೆ, ಭ್ರಷ್ಟಾಚಾರದ ವಿರುದ್ಧ ಒಳ್ಳೆಯ ನಿಲುವನ್ನು ತೆಗೆದುಕೊಂಡಿದ್ದಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ನೇಪಾಳದ ಜನತೆಗೂ, ಅಲ್ಲಿಯ ಸೇನೆಗೂ ಹಾಗೂ ಪ್ರತಿಭಟನಾ ನಾಯಕರಿಗೂ ಒಳ್ಳೆಯ ಮಾರ್ಗದರ್ಶಿ ಎಂದು ಬಿಂಬಿಸಿದ್ದಾರೆ.

ಈ ವಾರದ ಆರಂಭದಲ್ಲಿ ಸಾಮಾಜಿಕ ಜಾಲತಾಣಗಳನ್ನು ನಿಷೇಧ ಮಾಡಿದ್ದ ವಿಚಾರವಾಗಿ ನೇಪಾಳದಲ್ಲಿ ಜೆನ್​ಜಿ ಗುಂಪು ದೇಶಾದ್ಯಂತ ರೋಡಿಗಿಳಿದು ಪ್ರತಿಭಟನೆ ನಡೆಸಿದರು. ಇನ್ನು ಭ್ರಷ್ಟಾಚಾರ ವಿರುದ್ಧ ಪ್ರಧಾನಿ ಓಲಿಗೆ ರಾಜಿನಾಮೆ ನೀಡಬೇಕೆಂದು ಒತ್ತಾಯ ಮಾಡಿದ್ದರು. ಇದಾದ ಬಳಿಕ ಸಾಮಾಜಿಕ ಜಾಲತಾಣಗಳ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆಗೆದುಕೊಳ್ಳಲಾಯಿತು. ಈ ಹಿಂಸಾಚಾರದಲ್ಲಿ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪ್ರಧಾನಿ ಮೋದಿ ಟ್ವೀಟ್

ದೇಶದ ಶಾಂತಿ ಮತ್ತು ಸಮೃದ್ಧಿಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದ , ಪ್ರಧಾನಿ ಮೋದಿ ಕರ್ಕಿ ಅವರಿಗೆ ಅಭಿನಂದನಾ ಸಂದೇಶವನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನೇಪಾಳದ ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಶ್ರೀಮತಿ ಸುಶೀಲಾ ಕರ್ಕಿ ಅವರಿಗೆ ಹೃದಯೀಸ್ಪರ್ಶಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನೇಪಾಳದಲ್ಲಿರುವ ನನ್ನ ಸಹೋದರ ಸಹೋದರಿಯರ ಶಾಂತಿ ಮತ್ತು ಪ್ರಗತಿ ಮತ್ತು ಸಮೃದ್ಧಿಗೆ ಭಾರತ ಸದಾ ನೆರವಾಗಿರುತ್ತದೆ ಎಂದು ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net