Odisha School Tragedy | ಹಾಸ್ಟೆಲ್​​ ವಿದ್ಯಾರ್ಥಿಗಳು ಮಲಗಿದ್ದ ವೇಳೆ ಕಣ್ಣಿಗೆ ಫೆವಿಕ್ವಿಕ್ ಹಾಕಿದ ಸಹಪಾಠಿಗಳು!; ಪ್ರಾಚಾರ್ಯನ ತಲೆದಂಡ

Odisha School Tragedy
Published on

Odisha School Tragedy: ಸರ್ಕಾರಿ ವಸತಿ ಶಾಲೆಯ ಎಂಟು ವಿದ್ಯಾರ್ಥಿಗಳು ಮಲಗಿದ್ದಾಗ, ಕೆಲವು ಸಹಪಾಠಿಗಳು ಫೆವಿಕ್ವಿಕ್ ಅನ್ನು ಕಣ್ಣಿಗೆ ಹಾಕಿದ್ದರಿಂದ ಅವರ ಕಣ್ಣಿಗಳಿಗೆ ಹಾನಿಯಾಗಿರುವ ಆಘಾತಕಾರಿ ಘಟನೆ ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಫಿರಿಂಗಿಯಾ ಬ್ಲಾಕ್‌ನ ಸಲಗುಡದಲ್ಲಿರುವ ಸೇವಾಶ್ರಮ ಶಾಲೆಯಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಹಾಸ್ಟೆಲ್ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಂತ್ರಸ್ತರನ್ನು 4 ಮತ್ತು 5 ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಂದು ಗುರುತಿಸಲಾಗಿದ್ದು, ಶುಕ್ರವಾರ ಗೋಚಪಾಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅವರನ್ನೆಲ್ಲಾ ದಾಖಲಿಸಲಾಗಿದ್ದು, ನಂತರ ಅಲ್ಲಿಂದ ಫುಲ್ಬಾನಿಯಲ್ಲಿರುವ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಯಿತು. ಮೂಲಗಳ ಮಾಹಿತಿಯ ಪ್ರಕಾರ, ಕಣ್ಣುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದು, ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿರುವುದರಿಂದ ಅಪಾಯ ತಪ್ಪಿದೆ, ಈಗಾಗಲೇ ಒಬ್ಬ ವಿದ್ಯಾರ್ಥಿಯನ್ನು ಮನೆಗೆ ಕಳುಹಿಸಲಾಗಿದ್ದು, ಏಳು ಜನರಿಗೆ ಚಿಕಿತ್ಸೆ ಮುಂದುವರೆದಿದೆ.

ಸಾರ್ವಜನಿಕರ ಆಕ್ರೋಶದ ನಂತರ, ಜಿಲ್ಲಾಡಳಿತ ಮುಖ್ಯೋಪಾಧ್ಯಾಯ ಮನೋರಂಜನ್ ಸಾಹುರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದು, ವಾರ್ಡನ್‌ಗಳು ಮತ್ತು ಸೂಪರಿಂಟೆಂಡೆಂಟ್‌ನಂತಹ ಹಾಸ್ಟೆಲ್ ಸಿಬ್ಬಂದಿಯ ಲೋಪಗಳ ಕುರಿತು ತನಿಖೆಗೆ ಆದೇಶಿಸಲಾಗಿದೆ. ಕ್ಯಾಂಪಸ್‌ನಲ್ಲಿರುವ ಮಕ್ಕಳು ಆ ಫೆವಿಕ್ವಿಕ್​​​ ಹೇಗೆ ಪಡೆದರು ಮತ್ತು ಈ ಕೃತ್ಯವು ತಮಾಷೆಯೋ ಅಥವಾ ಉದ್ದೇಶಪೂರ್ವಕ ನಡೆದಿದೆಯೋ ಎಂಬುದರ ಕುರಿತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಈ ಘಟನೆಗೆ ಸಂತ್ರಸ್ತ ಮಕ್ಕಳ ಪೋಷಕರು ಮತ್ತು ಸ್ಥಳೀಯ ಮುಖಂಡರು ಘಟನೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಬೇಜವಾಬ್ದಾರಿತನ ಪ್ರದರ್ಶಿಸಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ. ಈ ಘಟನೆಯು ಒಡಿಶಾದ ಬುಡಕಟ್ಟು ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಮೇಲ್ವಿಚಾರಣೆಯ ಬಗ್ಗೆ ಮತ್ತೆ ಕಳವಳವನ್ನುಂಟುಮಾಡಿದೆ.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net