

ಬೆಂಗಳೂರು: ಸಾಫ್ಟ್ವೇರ್ ಇಂಜಿನಿಯರ್ ಮನೆಯಲ್ಲಿ ಬರೋಬ್ಬರಿ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ನೇಪಾಳ ಸೇರಿದ್ದ ಸೆಕ್ಯೂರಿಟಿ ಗಾರ್ಡ್, ಪತ್ನಿ ಮೇಲಿನ ಪ್ರೀತಿಗೆ ವಾಪಸ್ ಬೆಂಗಳೂರಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ.
ನೇಪಾಳ ಮೂಲದ ಸುರೇಂದ್ರ ಗೂರ್ಖಾ ಅಲಿಯಾಸ್ ಗಣೇಶ್ ಕಡ್ಕ ಬಂಧಿತ. ಈತನಿಂದ 450 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
12 ವರ್ಷಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ ಸುರೇಂದ್ರ, ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಮದುವೆಯಾಗಿ ಪತ್ನಿಯೊಂದಿಗೆ ಪ್ರಶಾಂತ್ನಗರದಲ್ಲಿ ನೆಲೆಸಿದ್ದ. ಕೆಲ ದಿನಗಳ ಹಿಂದೆ ಚಂದ್ರಾಲೇಔಟ್ನಲ್ಲಿರುವ ಸಾಫ್ಟ್ವೇರ್ ಕಂಪನಿಯ ಉದ್ಯೋಗಿಯೊಬ್ಬರ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಮನೆ ಬೀಗ ಒಡೆದು ಚಿನ್ನಾಭರಣ ದೋಚಿದ್ದ. ಆನಂತರ ಪತ್ನಿಯನ್ನು ಬಿಟ್ಟು ನೇಪಾಳಕ್ಕೆ ಹೋಗಿ ಅಡಗಿದ್ದ. ಕುಟುಂಬ ಸಮೇತ ಪ್ರವಾಸಕ್ಕೆ ಹೋಗಿದ್ದ ಸಾಫ್ಟ್ವೇರ್ ಉದ್ಯೋಗಿ ಮನೆಗೆ ಹಿಂದಿರುಗಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಟೆಕ್ಕಿ ನೀಡಿದ ದೂರಿನ ಮೇರೆಗೆ ಚಂದ್ರಾಲೇಔಟ್ ಠಾಣೆ ಪೊಲೀಸರು ತನಿಖೆ ಕೈಗೊಂಡಾಗ ಕೃತ್ಯ ನಡೆದ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಆರೋಪಿ ಬಂದಿದ್ದ ಬೈಕ್ನ ಚಿತ್ರ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಪರಿಶೀಲನೆ ನಡೆಸಿದಾಗ ಮನೆ ವಿಳಾಸ ಲಭ್ಯವಾಗಿತ್ತು. ಆದರೆ, ಅಷ್ಟರಲ್ಲಿ ಪತ್ನಿಯನ್ನು ಬಿಟ್ಟು ಕಾವಲುಗಾರ ನೇಪಾಳ ಸೇರಿದ್ದ. ವಿಚಾರಣೆ ಸಲುವಾಗಿ ಆರೋಪಿಯ ಪತ್ನಿಯನ್ನು ವಶಕ್ಕೆ ಪಡೆದಿದ್ದರು. ವಿಷಯ ತಿಳಿದ ಸೆಕ್ಯೂರಿಟಿ ಗಾರ್ಡ್, ಪತ್ನಿ ಮೇಲಿನ ಪ್ರೀತಿಗೆ ವಾಪಸ್ ಬೆಂಗಳೂರಿಗೆ ಬಂದು ಚಂದ್ರಾಲೇಔಟ್ ಪೊಲೀಸರಿಗೆ ಶರಣಾಗಿ ಕದ್ದ ಚಿನ್ನಾಭರಣ ವಾಪಸ್ ಒಪ್ಪಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.