

ಚೆನ್ನೈ: ಎಟಿಎಂಗೆ ನುಗ್ಗಿ ಕಳ್ಳತನ ಮಾಡಲು ಪ್ರಯತ್ನಿಸಿದ ಗ್ಯಾಂಗ್ ಒಂದಕ್ಕೆ ಎಟಿಎಂ ಒಡೆಯಲು ಆಗದ ಹಿನ್ನೆಲೆಯಲ್ಲಿ ಎಟಿಎಂ ಮಷಿನ್ ಅನ್ನೇ ಹೊತ್ತೊಯ್ದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಮಿಳುನಾಡಿನ ತಿರುಪ್ಪೂರಿನ ಬ್ಯಾಂಕ್ ಆಫ್ ಬರೋಡಾ ಎಟಿಎಂನಲ್ಲಿ ಇಂತಹ ಘಟನೆ ನಡೆದಿದೆ. ಭಾನುವಾರ ಮುಂಜಾನೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಮುಖವಾಡ ಧರಿಸಿದ್ದ ನಾಲ್ವರು ಎಟಿಎಂ ಒಳಗೆ ನುಗ್ಗಿದ್ದಾರೆ. ಅಲ್ಲಿದ್ದ ಎಟಿಎಂ ಮಷಿನ್ನಿಂದ ಹಣವನ್ನು ಹೊರ ತೆಗೆಯಲು ಪ್ರಯತ್ನಿಸಿದ್ದಾರೆ. ಅದು ಆಗದಿದ್ದಾಗ ಮಷಿನ್ನನ್ನೇ ಎತ್ತಿಕೊಂಡು ಹೊರನಡೆದಿದ್ದಾರೆ. ಅದನ್ನು ಗಾಡಿಯೊಳಗೆ ಇಟ್ಟುಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ.
ಬೆಳಗ್ಗೆ ಎಟಿಎಂನಿಂದ ಹಣ ತೆಗೆಯಲು ಬಂದ ಜನರಿಗೆ ಎಟಿಎಂ ಬಾಗಿಲು ಒಡೆದಿರುವುದು ಕಂಡಿದೆ. ಅಲ್ಲಿದ್ದ ಮಷಿನ್ ಇಲ್ಲದಿದ್ದನ್ನು ಕಂಡು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಕಳೆದ ಎರಡು ವರ್ಷಗಳಿಂದ ರಾತ್ರಿ ಪಾಳೆಯಲ್ಲಿ ಯಾರೊಬ್ಬರೂ ಎಟಿಎಂಗೆ ಭದ್ರತೆ ನೀಡುತ್ತಿಲ್ಲ. ಹಾಗಾಗಿಯೇ ಈ ಕೃತ್ಯ ನಡೆಯುವಂತಾಗಿದೆ ಎಂದು ಬ್ಯಾಂಕ್ ಆರೋಪಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಆರಂಭಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ