

ಮೋತಿಹಾರಿ: 40 ದಿನದ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಪತ್ತೆಯಾಗಿದೆ! ಐದು ಲಕ್ಷ ರೋಗಿಗಳ ಪೈಕಿ ಒಬ್ಬರಲ್ಲಿ ಇಂತಹ ವಿರಳ ಪ್ರಕರಣ ಬಿಹಾರದ ಮಗುವಿನಲ್ಲಿ ಕಂಡುಬಂದಿದೆ.
ಮಗುವಿನ ಹೊಟ್ಟೆ ಉಬ್ಬರಿಸಿದೆ, ಸರಿಯಾಗಿ ಮೂತ್ರ ವಿಸರ್ಜನೆ ಮಾಡುತ್ತಿಲ್ಲ ಎಂದು ಆತಂಕಗೊಂಡ ಪಾಲಕರು ಮಗುವನ್ನ ಆಸ್ಪತ್ರೆಗೆ ಕರೆತಂದಿದ್ದರು. ವೈದ್ಯರು ಪರೀಕ್ಷಿಸಿದಾಗ ಮಗುವಿನ ಹೊಟ್ಟೆಯಲ್ಲಿ ಭ್ರೂಣ ಬೆಳೆದಿರುವುದು ಪತ್ತೆಯಾಗಿದೆ ಎಂದು ಬಿಹಾರದ ಮೋತಿಹಾರಿಯ ರಹಮಾನಿಯಾ ವೈದ್ಯಕಿಯ ಕೇಂದ್ರದ ಮೂಲಗಳು ತಿಳಿಸಿವೆ.
ಹೊಟ್ಟೆ ಉಬ್ಬಿದ ಕಾರಣ ಮಗುವಿಗೆ ಸರಿಯಾಗಿ ಮೂತ್ರ ವಿಸರ್ಜಿಸಲಾಗುತ್ತಿಲ್ಲ ಎಂದು ಪಾಲಕರು ವೈದ್ಯರಿಗೆ ತಿಳಿಸಿದ್ದರು. ಹೊಟ್ಟೆಯ ಉಬ್ಬುವಿಕೆ ಮತ್ತು ಮೂತ್ರದ ನಿಲುಗಡೆಗೆ ಕಾರಣ ಪತ್ತೆ ಹಚ್ಚಲು ಡಾ. ತಬ್ರೇಜ್ ಅಜೀಜ್ ಮಗುವಿಗೆ ಕಂಪ್ಯೂಟೆಡ್ ಟೊಮೊಗ್ರಫಿ (ಇಖ) ಸ್ಕ್ಯಾನ್ ಮಾಡಿಸುವಂತೆ ಸೂಚಿಸಿದರು. ಇದರ ಫಲಿತಾಂಶದಲ್ಲಿ ಮಗುವಿನ ಹೊಟ್ಟೆಯೊಳಗೆ ಭ್ರೂಣ ಬೆಳೆದಿರುವುದು ಕಂಡು ವೈದ್ಯರ ತಂಡ ಅಚ್ಚರಿಗೊಂಡಿದೆ.
ವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ "ಫೋಟಸ್ ಇನ್ ಫೆಟೂ'' ಅಥವಾ ''ಮಗುವಿನ ಹೊಟ್ಟೆಯಲ್ಲಿ ಭ್ರೂಣದ ಉಪಸ್ಥಿತಿ'' ಎನ್ನಲಾಗುತ್ತದೆ. ಐದು ಲಕ್ಷ ರೋಗಿಗಳ ಪೈಕಿ ಒಬ್ಬರಿಗೆ ಮಾತ್ರ ಸಂಭವಿಸುವ ವಿರಳ ಪ್ರಕರಣ ಇದು. ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಿ ಭ್ರೂಣ ಹೊರತೆಗೆಯಲಾಗಿದೆ. ಮಗು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಡಾ.ತಬ್ರೇಜ್ ವಿವರಿಸಿದ್ದಾರೆ.